ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ನೀಲಗಿರಿ ಜಿಲ್ಲೆಯಲ್ಲಿರುವ ಸುವಿಶಾಲ ಹಾಗೂ ನಯನಮನೋಹರ ಎಸ್ಟೇಟ್ ಇದ್ದು ಅಲ್ಲಿನ ಬಂಗಲೆಗೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಸೋಮವಾರ ಪ್ರಕಟಗೊಂಡಿರುವ ವರದಿಗಳು ತಿಳಿಸಿವೆ.
ಯಾರೋ ಕೆಲವು ಅಪರಿಚಿತ ದುಷ್ಕರ್ಮಿಗಳು ಈ ಸೆಕ್ಯುರಿಟಿ ಗಾರ್ಡನ್ನು ಕೊಂದಿರವುದಾಗಿ ಎಎನ್‌ಐ ವರದಿ ಹೇಳಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದ್ದ ಜಯಲಲಿತಾ ಅವರ ಕೊಡನಾಡು ಎಸ್ಟೇಟ್‌ನಲ್ಲಿರುವ ಬಂಗಲೆಯ ಸೆಕ್ಯುರಿಟಿ ಗಾರ್ಡ್ ಸತ್ತು ಬಿದ್ದಿರುವುದು ನಿನ್ನೆ ಭಾನುವಾರ ತಡರಾತ್ರಿ ಪ್ರತ್ತೆಯಾಗಿತ್ತು.
“ನಾವು ಕೆಲವು ಶಂಕಿತರನ್ನು ಪ್ರಶ್ನಿಸುತ್ತಿದ್ದೇವೆ. ಆದರೆ ನಮಗೆ ಈ ಕೊಲೆ ಕೃತ್ಯದ ಬಗ್ಗೆ ಯಾವುದೇ ಸುಳಿವು, ನಿಖರ ಮಾಹಿತಿ ಈ ವರೆಗೆ ಲಭಿಸಿಲ್ಲ’ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿರುವುದನ್ನು ಉಲ್ಲೇಖೀಸಿ ಎನ್‌ಡಿಟಿವಿ ವರದಿ ಮಾಡಿದೆ.
ಜಯಲಲಿತಾ ಅವರ ಕೊಡನಾಡಿನಲ್ಲಿರುವ ಎಸ್ಟೇಟ್ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್ ಬಂಗಲೆಯಲ್ಲಿ ಜಯಾ ಆಗೀಗ ಬಂದು ಇರುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು.