Advertisement
ಹರ..ಜಾತ್ರೆ ಹಿಂದಿನ ಪರಿಕಲ್ಪನೆ: ಯಾವುದೇ ಕಾರ್ಯದ ಪ್ರಾರಂಭ ಮತ್ತು ಕೊನೆಯಲ್ಲಿ ಹರ..ಹರ..ಮಹಾದೇವ..ಎನ್ನುತ್ತೇವೆ. ಹರ ಎಂದರೆ ಉತ್ಸಾಹ, ವಿಜಯ, ಯಶಸ್ಸು ಎಂದರ್ಥ. ಜಪಾನಿ ಭಾಷೆಯಲ್ಲಿ ಹ..ಎಂದರೆ ಸೂರ್ಯ, ರ..ಎಂದರೆ ಚಂದ್ರ. ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಉತ್ತರದ ಕಡೆಗೆ ಬದಲಾಯಿಸುವಂತೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವೂ ಈಗ ಉತ್ತರೋತ್ತರವಾಗಿ ಬದಲಾಗುತ್ತಿದೆ. ಹಾಗಾಗಿಯೇ, ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದೇ ಹರ ಜಾತ್ರಾ ಮಹೋತ್ಸವ ಪ್ರಾರಂಭಿಸುವ ಪರಿಕಲ್ಪನೆ ಬಂತು.
Related Articles
Advertisement
ಪೀಠ ಬೆಳೆಯಲಿದೆ: ಹರಿಹರರ ಪೀಠ ಪ್ರಾರಂಭವಾಗಿ 12 ವರ್ಷದಲ್ಲಿ ಎಷ್ಟು ಬೆಳೆಯಬೇಕಾಗಿತ್ತೋ ಅಷ್ಟು ಬೆಳೆದಿಲ್ಲ. 12 ವರ್ಷದ ಪೀಠವನ್ನು ಸಮಾಜ ಬಾಂಧವರು ಬೆಳೆಸಬೇಕು. ಮುಂದೆ ಪೀಠ ಸಮಾಜದ ಪರವಾಗಿ ನಿಲ್ಲುತ್ತದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಪೀಠದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಆಗಬೇಕಿದ್ದು, ಪ್ರತಿಯೊಬ್ಬರೂ ಅಮೂಲ್ಯ ಸಹಕಾರ ನೀಡುತ್ತಿದ್ದಾರೆ.
ಎಲ್ಲ ಪೀಠಗಳ ಅಭಿವೃದ್ಧಿ: ನಮ್ಮ ಸಮಾಜದ ಬೆಳವಣಿಗೆ ಜೊತೆಗೆ ಎಲ್ಲಾ ಸಮಾಜ ಹಾಗೂ ಪೀಠಗಳು ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಅಭಿಲಾಷೆ. ಹಾಗಾಗಿಯೇ, ನಾವು ಎಲ್ಲ ಸಮಾಜ, ಪೀಠದವರು ಹರಿಹರದ ಪೀಠ, ಹರ ಜಾತ್ರಾ ಮಹೋತ್ಸವಕ್ಕೆ ಬರಬೇಕು ಎಂದು ಮುಕ್ತವಾಗಿ ಆಹ್ವಾನ ನೀಡುತ್ತೇವೆ. ಬೆಳವಣಿಗೆ, ಅಭಿವೃದ್ಧಿಯಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು. ಅದಕ್ಕಾಗಿ ನಮ್ಮ ನಡಿಗೆಯ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಇದು ನಮ್ಮ ಸಿದ್ಧಾಂತ.
ಆರೋಗ್ಯ…ಯೋಗ ಶಿಬಿರ: ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಹಾಗಾಗಿಯೇ, ನಾವು ಎಲ್ಲಾ ಕಡೆ ಯೋಗದ ಬಗ್ಗೆ ತಿಳಿಸುತ್ತೇವೆ. 86 ದೇಶಗಳಲ್ಲಿ ಯೋಗದ ಬಗ್ಗೆ ಹೇಳಿಕೊಟ್ಟಿದ್ದೇವೆ. ಸ್ಥಳೀಯವಾಗಿ ಯೋಗದ ಜಾಗೃತಿ, ಶಿಬಿರ ನಡೆಸುತ್ತಿದ್ದೇವೆ. ಎಲ್ಲಿಯೇ ಹೋಗಲಿ ಯೋಗ, ಸತ್ಸಂಗ ನಡೆಸಿಕೊಡುತ್ತಿದ್ದೇವೆ.
ಮಹಾರಾಷ್ಟ್ರ ಮಾದರಿ ಮೀಸಲಾತಿ: ಯಲಬುರ್ಗಾದ ಬಿ.ಎಂ.ಹನುಮನಾಳ್‌ನವರು 1999ರಲ್ಲಿ ಪಂಚಮಸಾಲಿ ಸಂಘ ಪ್ರಾರಂಭಿಸಿದ ನಂತರವೇ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಅಸ್ತಿತ್ವ ಕಂಡುಕೊಂಡಿದ್ದು. 2008ರಲ್ಲಿ ಹರಿಹರದ ಪೀಠ ಪ್ರಾರಂಭವಾದ ನಂತರ ದಾಖಲೆಗಳು ದೊರೆಯಲಾರಂಭಿಸಿದ್ದು, ಒಂದು ದಾಖಲೆಯೇ. ಸಂಘದ 25ನೇ ವರ್ಷದ ಅಂಗವಾಗಿಯೇ “ಬೆಳ್ಳಿ ಬೆಡಗು’ ಕಾರ್ಯಕ್ರಮ ನಡೆಸಲಾಗುತ್ತಿದೆ.ಪಂಚಮಸಾಲಿ ಪೀಠ ಪ್ರಾರಂಭವಾಗಿದ್ದೇ ಮೀಸಲಾತಿಗಾಗಿ. ಹಾಗಾಗಿ, ಪೀಠ ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತದೆ. ಆರ್ಥಿಕ ಆಧಾರದಲ್ಲಿ ನೀಡುವುದಾದರೆ ಎಲ್ಲ ಬಡ ವರ್ಗದವರಿಗೆ ಮೀಸಲಾತಿ ನೀಡಿ, ಜಾತಿ ಆಧಾರದಲ್ಲಿ ನೀಡುವುದಾದರೆ “ಪ್ರವರ್ಗ-3-ಬಿ’ ಯಲ್ಲಿರುವ ವೀರಶೈವ ಪಂಚಮಸಾಲಿ ಸಮಾಜಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ನಮ್ಮ ಆಗ್ರಹ.
ಮೂರು ಸಚಿವ ಸ್ಥಾನ ಬೇಕು: ನಮ್ಮ ಸಮಾಜದವರಿಗೆ ಇನ್ನೂ ಮೂರು ಸಚಿವ ಸ್ಥಾನ ನೀಡಲೇಬೇಕು. ಅದನ್ನು ಕೇಳುತ್ತಿರುವುದು ನಮ್ಮ ವೈಯಕ್ತಿಕಕ್ಕಾಗಿ ಅಲ್ಲ, ಸಮಾಜಕ್ಕಾಗಿ. ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ಬಗ್ಗೆ ಆಗ್ರಹಿಸುತ್ತೇವೆ.
* ರಾ.ರವಿಬಾಬು