ಮುಳಬಾಗಿಲು: ನಗರದಲ್ಲಿ ನಡೆದ ಶೋಭಾ ಯಾತ್ರೆ ವೇಳೆ ಜನರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘರ್ಷಣೆಯಲ್ಲಿ 2 ದ್ವಿಚಕ್ರ ವಾಹನ ಬೆಂಕಿಗಾಹುತಿಯಾಗಿ 4 ಜನರು ಗಾಯಗೊಂಡಿದ್ದರು. ಈ ಘಟನೆ ಸಂಬಂಧ ನಗರ ಠಾಣೆಯಲ್ಲಿ ಮೂರು ಪ್ರಕರಣ ದಾಖಲಿಸಿ ಒಂಭತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಆವಣಿಯಲ್ಲಿ ನಡೆಯಲಿರುವ ಶ್ರೀರಾಮ ಮಹಾ ಸಾಮ್ರಾಜ್ಯ ಪಟ್ಟಾಭಿಷೇಕ ಅಂಗವಾಗಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಶ್ರೀ ರಾಮಚಂದ್ರ ಪ್ರತಿಮೆಯ ಶೋಭಾಯಾತ್ರೆ ಆರಂಭವಾಗಿ ರಾತ್ರಿ 8 ಗಂಟೆಗೆ ಜಹಾಂಗೀರ್ ವೃತ್ತ ತಲುಪಿತ್ತು. ಶೋಭಾಯಾತ್ರೆ ಮುಂದಕ್ಕೆ ಸಾಗಿದ ನಂತರ ಈದ್ಗಾ ಮೈದಾನದ ಕಡೆಯಿಂದ ಕಿಡಿಗೇಡಿಗಳು ಕಲ್ಲು ತೂರಿದ್ದು, ಇದರಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಕಾರು, ಅಂಗಡಿಗೆ ಹಾನಿ ಉಂಟಾಗಿತ್ತು. ಅಲ್ಲದೇ ದ್ವಿಚಕ್ರ ವಾಹನ ಸವಾರನನ್ನು ತಡೆದು ಥಳಿಸಿ ವಾಹನಕ್ಕೆ ಬೆಂಕಿ ಹಚ್ಚಿದ್ದರು.
ವಾಹನ ಬೆಂಕಿಗಾಹುತಿ: ಘಟನೆಯಲ್ಲಿ ಎರಡು ದ್ವಿಚಕ್ರ ವಾಹನ ಬೆಂಕಿಗಾಹುತಿ ಯಾಗಿದ್ದು, ಮಿನಿ ಟ್ರಕ್ ಗಾಜು ಪುಡಿಯಾಗಿತ್ತು. ಈ ಘಟನೆ ಸಂದರ್ಭದಲ್ಲಿ ಕಿಡಿಗೇಡಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುತ್ತಾರೆಂದು ಶಂಕಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ನಗರದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಮತ್ತು ಎಎಸ್‌ಪಿ ಸೇರಿದಂತೆ ಜಿಲ್ಲೆಯ ಹಲವಾರು ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿ ಪೊಲೀಸರನ್ನು ಬಿಗಿ ಬಂದೋಬಸ್ತ್ ಗೆ ನಿಯೋಜಿಸಿದ್ದರು.
ಪೊಲೀಸ್ ಬಂದೋಬಸ್ತ್: ಘಟನೆ ಸಂಬಂಧ ತಡರಾತ್ರಿ ನಗರಕ್ಕೆ ಭೇಟಿ ನೀಡಿದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪರಿಶೀಲನೆ ನಡೆಸಿ ಪ್ರತಿಕ್ರಿಯಿಸಿ, ಶೋಭಾಯಾತ್ರೆ ವೇಳೆ ಜಹಾಂಗೀರ್ ಮೊಹಲ್ಲ ದರ್ಗಾದ ಬಳಿ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದ ವೇಳೆ ಕರೆಂಟ್ ಹೋಗಿದ್ದು, ಅದೇ ಸಮಯದಲ್ಲಿ ಏಕೆ ಕರೆಂಟ್ ಹೋಯ್ತು ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ಸದ್ಯ ಎಲ್ಲವೂ ತನಿಖೆ ಹಂತದಲ್ಲಿದೆ ಎಂದ ಅವರು, ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದೆ. ಪೊಲೀಸ್ ಬಂದೋಬಸ್ತ್ ಹೆಚ್ಚುವರಿಯಾಗಿ ನಿಯೋಜನೆ ಆಗಿದೆ. ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಇರುವುದರಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಪರಿಸ್ಥಿತಿ ಶಾಂತವಾಗಿದ್ದು ಸಹಜ ಸ್ಥಿತಿಯಲ್ಲಿದೆ ಎಂದರು.
ಮೂರು ದಿನ ನಿಷೇಧಾಜ್ಞೆ ಜಾರಿ: ನಗರದಲ್ಲಿ ಏಪ್ರಿಲ್ 10ರ ಮಧ್ಯರಾತ್ರಿ ವರಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ನೀಡಿದ್ದು, ನಗರದ ರಸ್ತೆಯಲ್ಲಿ ಗುಂಪು, ಅಕ್ರಮ ಕೂಟ ಸೇರಿದರೆ ಅಂತಹವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಶೋಭಯಾತ್ರೆ ವೇಳೆ ಕಲ್ಲು ತೂರಾಟ ಸಂಬಂಧ, ಶ್ರೀರಾಮನವಮಿ ಹಬ್ಬದ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಮೂರು ದಿನ 144 ಸೆಕ್ಷನ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು.
ನಗರಸಭೆಯಿಂದ ಆದೇಶ: ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡದಂತೆ ನಗರಸಭೆ ಅರೋಗ್ಯ ನಿರೀಕ್ಷಕರು ಆದೇಶ ಹೊರಡಿಸಿದ್ದು, ಈ ಆದೇಶ, ಆದೇಶ ಪಾಲನೆ ಆಗದೆ ಇದ್ದಲ್ಲಿ ಕಾನೂನು ರೀತ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕೋಲಾರದಲ್ಲಿ ಶೋಭಯಾತ್ರೆಗೆ ಅನುಮತಿ ಇಲ್ಲ : ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಮೂರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇವೆ. 9 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. 30 ಬೈಕ್ ವಶಕ್ಕೆ ಪಡೆದುಕೊಂಡಿದ್ದೇವೆ, ಸಿಸಿಟೀವಿ ಪರಿಶೀಲನೆ ನಡೆಯುತ್ತಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚುತ್ತೇವೆ. ಕಾರ್ಯಕ್ರಮ ಆಯೋಜಕ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ. ಏನಾದ್ರು ಆದ್ರೆ ನಾವೇ ಜವಾಬ್ದಾರಿ ಎಂದು ಆಯೋಜಕರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆವಣಿಯ ಜಾತ್ರೆಗೆ ಯಾವುದೇ ನಿಬಂಧನೆಗಳಿಲ್ಲ. ಕೋಲಾರದಲ್ಲಿ ನಡೆಯಬೇಕಿದ್ದ ಶೋಭಯಾತ್ರೆಗೆ ಅನುಮತಿ ನೀಡಿಲ್ಲ. ರಾಮನವಮಿ ಆಚರಣೆ ಮಾತ್ರ ಅನುಮತಿ ನೀಡಿದ್ದೇವೆ ಎಂದು ಕೋಲಾರ ಎಸ್ಪಿ ದೇವರಾಜ್ ತಿಳಿಸಿದ್ದಾರೆ.