Advertisement

2085ರವರೆಗೂ ಓದುವಂತಿಲ್ಲ ಆ ರಹಸ್ಯ ಪತ್ರ! ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಬರೆದಿರುವ ಲೆಟರ್‌

06:58 PM Sep 12, 2022 | Team Udayavani |

ಲಂಡನ್‌: ಅದು 1986ರಲ್ಲಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರು ಬರೆದಿರುವ ಪತ್ರ. ಆದರೆ, ಈವರೆಗೆ ಅದನ್ನು ಯಾರೂ ಓದಿಲ್ಲ. ಅದರೊಳಗೆ ಏನಿದೆ ಎಂಬುದೂ ಗೊತ್ತಿಲ್ಲ. ಈಗ ರಾಣಿ ಬದುಕಿಲ್ಲ. ಹಾಗಂತ ಆ ಪತ್ರವನ್ನು ಈಗಲಾದರೂ ಓದಬಹುದೇ?

Advertisement

ಇಲ್ಲ. 2085ರವರೆಗೂ ಆ ಪತ್ರದಲ್ಲಿರುವ ಅಂಶಗಳು ರಹಸ್ಯವಾಗಿಯೇ ಇರಬೇಕು ಎಂಬುದು ಸ್ವತಃ ರಾಣಿಯ ಆಜ್ಞೆಯಾಗಿದೆ. ಈ ಸೀಕ್ರೆಟ್‌ ಪತ್ರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಕಟ್ಟಡದ ಕೋಣೆಯೊಂದರೊಳಗೆ ಭದ್ರವಾಗಿದೆ. ಅದನ್ನು ನಿರ್ಬಂಧಿ ಪ್ರದೇಶದಲ್ಲಿ ಗಾಜಿನ ಪೆಟ್ಟಿಗೆಯೊಂದರಲ್ಲಿ ರಕ್ಷಿಸಿಡಲಾಗಿದೆ.

ಅದರಲ್ಲೇನಿದೆ?
ಪತ್ರದಲ್ಲಿ ಏನನ್ನು ಬರೆಯಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ರಾಣಿಯು ಸಿಡ್ನಿಯ ಜನರಿಗೆ ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಪತ್ರದ ಹೊರಗೆ ನೀಡಿರುವ ಟಿಪ್ಪಣಿಯಲ್ಲಿ ಸಿಡ್ನಿ ಮೇಯರ್‌ ಅನ್ನು ಉದ್ದೇಶಿಸಿ, “ನೀವೇ ಆಯ್ಕೆ ಮಾಡಿರುವ ದಿನಾಂಕದಂತೆ 2085ರಲ್ಲಿ ನೀವು ಈ ಪತ್ರವನ್ನು ತೆರೆಯಬೇಕು ಮತ್ತು ಸಿಡ್ನಿ ಜನರಿಗೆ ನಾನು ನೀಡಿರುವ ಸಂದೇಶವನ್ನು ರವಾನಿಸಬೇಕು’ ಎಂದು ಬರೆಯಲಾಗಿದೆ.

ನಿಸ್ವಾರ್ಥ ಸೇವೆಯ ಹಾದಿಯನ್ನು ಪಾಲಿಸುವೆ:
ಈ ನಡುವೆ, ಬ್ರಿಟನ್‌ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಲ್ಲಿನ ಸಂಸತ್‌ ಉದ್ದೇಶಿಸಿ ರಾಜ ಮೂರನೇ ಚಾರ್ಲ್ಸ್‌ ಸೋಮವಾರ ಮಾತನಾಡಿದ್ದಾರೆ. “ಸಾಂವಿಧಾನಿಕ ಆಡಳಿತದ ಅಮೂಲ್ಯ ತತ್ವಗಳನ್ನು ಎತ್ತಿಹಿಡಿಯುವಲ್ಲಿ ದಿ. ರಾಣಿ ಎರಡನೇ ಎಲಿಜಬತ್‌ ಅವರ ನಿಸ್ವಾರ್ಥ ಕರ್ತವ್ಯದ ಹಾದಿಯನ್ನು ಅನುಸರಿಸಲಾಗುವುದು,” ಎಂದು ವಾಗ್ಧಾನ ಮಾಡಿದ್ದಾರೆ.

ಜೆಟ್‌ನಲ್ಲಿ ಬರಬೇಡಿ, ಬಸ್ಸಲ್ಲೇ ಬನ್ನಿ!
ಸೆ.19ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಅಬ್ಬೇಯಲ್ಲಿ ನಡೆಯಲಿರುವ ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ವಿಶ್ವನಾಯಕರಿಗೆ ಹಲವು ಷರತ್ತುಗಳು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. “ಖಾಸಗಿ ವಿಮಾನಗಳಲ್ಲಿ ಬರುವಂತಿಲ್ಲ, ಬದಲಿಗೆ ವಾಣಿಜ್ಯ ವಿಮಾನಗಳ ಮೂಲಕ ಆಗಮಿಸಿ. ಯು.ಕೆ.ಗೆ ಪ್ರವೇಶಿಸಿದ ಬಳಿಕವೂ ಹೆಲಿಕಾಪ್ಟರ್‌ ಬಳಸುವಂತಿಲ್ಲ. ಅಂತ್ಯಕ್ರಿಯೆ ನಡೆಯುವಲ್ಲಿಗೆ ನಿಮ್ಮ ಸ್ವಂತ ಸರ್ಕಾರಿ ಕಾರುಗಳಲ್ಲಿ ಬರುವಂತಿಲ್ಲ. ಬದಲಿಗೆ ನಾವೇ ಕಳುಹಿಸಿಕೊಡುವ ಬಸ್‌ ಮೂಲಕವೇ ಆಗಮಿಸಬೇಕು’ ಎಂದು ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next