ಚಿತ್ರದುರ್ಗ: ಎಂಬಿಬಿಎಸ್ ದ್ವಿತೀಯ ವರ್ಷದ ಮೈಕ್ರೋ ಬಯಾಲಜಿ-1 ಪ್ರಶ್ನೆಪತ್ರಿಕೆ ಬಹಿರಂಗಗೊಂಡಿದೆ. ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ
ಕೇಂದ್ರದಲ್ಲಿ ಶನಿವಾರ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗಗೊಂಡಿದೆ.
ಈ ಪ್ರಶ್ನೆಪತ್ರಿಕೆ ವಾಟ್ಸ್‌ಅಪ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆ ಶನಿವಾರ ಬೆಳಗ್ಗೆ 9 ಗಂಟೆಗೆ ರಾಜ್ಯಾದ್ಯಂತ ಆರಂಭವಾಗಿತ್ತು. ಪರೀಕ್ಷೆ ಶುರುವಾಗಿ 10 ನಿಮಿಷದ ಬಳಿಕ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ಪ್ರಶ್ನೆಪತ್ರಿಕೆ ಚಿತ್ರದುರ್ಗದಲ್ಲಿ ಬಹಿರಂಗವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಪ್ರಕರಣದಲ್ಲಿ ಚಿತ್ರದುರ್ಗದ ಮೆಡಿಕಲ್ ಕಾಲೇಜಿನ ವೈದ್ಯರು, ಸಿಬ್ಬಂದಿ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಬಸವೇಶ್ವರ ವೈದ್ಯಕೀಯ ಕಾಲೇಜು ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ| ಪ್ರಶಾಂತ್ ಕೂಡ ಬಯಲಾಗಿರುವ ಪ್ರಶ್ನೆಪತ್ರಿಕೆ ಹಾಗೂ ಅಸಲಿ ಪ್ರಶ್ನೆಪತ್ರಿಕೆ ಒಂದೇ ಆಗಿವೆ ಎಂದು ದೃಢಪಡಿಸಿದ್ದಾರೆ. ಆದರೆ, ನಮ್ಮ ಕಾಲೇಜಿನಲ್ಲಿ ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿಲ್ಲ. ಎಲ್ಲಿ ಬಯಲಾಗಿದೆ ಎಂಬುದು ತಮಗೆ ಗೊತ್ತಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.