Advertisement

IND vs WI 2nd T20I : ಮತ್ತೆ ಮುಗ್ಗರಿಸಿದ ಭಾರತ

12:11 AM Aug 07, 2023 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ರೋಚಕ ಹೋರಾಟ ಕಂಡ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತವನ್ನು 2 ವಿಕೆಟ್‌ಗಳಿಂದ ಮಣಿಸಿದ ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Advertisement

ಬ್ಯಾಟಿಂಗ್‌ ಆಯ್ದುಕೊಂಡ ಭಾರತ 7 ವಿಕೆಟಿಗೆ 152 ರನ್‌ ಗಳಿಸಿದರೆ, ವೆಸ್ಟ್‌ ಇಂಡೀಸ್‌ 18.5 ಓವರ್‌ಗಳಲ್ಲಿ 8 ವಿಕೆಟಿಗೆ 155 ರನ್‌ ಬಾರಿಸಿತು. ತಿಲಕ್‌ ವರ್ಮ ಅವರ ಅರ್ಧ ಶತಕವೊಂದೇ ಭಾರತದ ಸರದಿಯ ಆಕರ್ಷಣೆ ಆಗಿತ್ತು.

ಹಾರ್ದಿಕ್‌ ಪಾಂಡ್ಯ ಮೊದಲ ಓವರ್‌ನಲ್ಲೇ 2 ವಿಕೆಟ್‌ ಉರುಳಿಸಿದರೂ ಭಾರತಕ್ಕೆ ಲಾಭವಾಗಲಿಲ್ಲ. ನಿಕೋಲಸ್‌ ಪೂರಣ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ವಿಂಡೀಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 40 ಎಸೆತಗಳಿಂದ 67 ರನ್‌ ಬಾರಿಸಿ ಪಂದ್ಯಕ್ಕೆ ತಿರುವು ಒದಗಿಸಿದರು (6 ಬೌಂಡರಿ, 4 ಸಿಕ್ಸರ್‌).

ಭಾರತ ಮತ್ತೊಮ್ಮೆ ಅಗ್ರ ಕ್ರಮಾಂಕದ ವೈಫ‌ಲ್ಯಕ್ಕೆ ಸಿಲುಕಿತು. ಶುಭಮನ್‌ ಗಿಲ್‌ (7) ಮತ್ತು ಸೂರ್ಯಕುಮಾರ್‌ (1) ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫ‌ಲರಾದರು. ಸೂರ್ಯ 3ನೇ ಎಸೆತದಲ್ಲೇ ರನೌಟ್‌ ಆಗಿ ನಿರ್ಗಮಿಸುವ ಸಂಕಟಕ್ಕೆ ಸಿಲುಕಿದರು. ಪವರ್‌ ಪ್ಲೇಯಲ್ಲಿ ಭಾರತದ ಸ್ಕೋರ್‌ ಕೇವಲ 34 ರನ್‌ ಆಗಿತ್ತು.

ಅನಂತರ ಇಶಾನ್‌ ಕಿಶನ್‌-ತಿಲಕ್‌ ವರ್ಮ ತಂಡವನ್ನು ಆಧರಿಸುವ ಸೂಚನೆ ನೀಡಿದರು. ಸ್ಕೋರ್‌ 60ಕ್ಕೆ ಏರಿತು. ಆಗ ರೊಮಾರಿಯೊ ಶೆಫ‌ರ್ಡ್‌ ಎಸೆತದಲ್ಲಿ ಇಶಾನ್‌ ಕಿಶನ್‌ ಬೌಲ್ಡ್‌ ಆದರು. ಇವರ ಹಿಂದಿನ ಎಸೆತವನ್ನು ಇಶಾನ್‌ ಸಿಕ್ಸರ್‌ಗೆ ಬಡಿದಟ್ಟಿದ್ದರು. ಇಶಾನ್‌ ಗಳಿಕೆ 23 ಎಸೆತಗಳಿಂದ 27 ರನ್‌ (2 ಬೌಂಡರಿ, 2 ಸಿಕ್ಸರ್‌). ಅರ್ಧ ಹಾದಿ ಕ್ರಮಿಸುವಾಗ ಭಾರತ 3 ವಿಕೆಟ್‌ ನಷ್ಟಕ್ಕೆ 65 ರನ್‌ ಮಾಡಿತ್ತು.

Advertisement

ಈ ನಡುವೆ ತಿಲಕ್‌ ವರ್ಮ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರು. ಆದರೆ ಸಂಜು ಸ್ಯಾಮ್ಸನ್‌ ವಿಫ‌ಲರಾದರು. ಎಸೆತಕ್ಕೊಂದರಂತೆ 7 ರನ್‌ ಮಾಡಿದ ಅವರು ಅಖೀಲ್‌ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪ್ಡ್ ಆದರು. ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ತಿಲಕ್‌ ವರ್ಮ ಸಿಡಿಯತೊಡಗಿದರು. ತಮ್ಮ ಮೊದಲ ಟಿ20 ಅರ್ಧ ಶತಕ ದಾಖಲಿಸಿದರು. 39 ಎಸೆತಗಳಲ್ಲಿ ಅವರ ಫಿಫ್ಟಿ ಪೂರ್ತಿಗೊಂಡಿತು. ಡೆತ್‌ ಓವರ್‌ ಆರಂಭವಾಗುವ ವೇಳೆ ಭಾರತ 4 ವಿಕೆಟಿಗೆ 106 ರನ್‌ ಗಳಿಸಿತ್ತು. ಆಗ ತಿಲಕ್‌ ಜತೆಯಲ್ಲಿದ್ದವರು ನಾಯಕ ಹಾರ್ದಿಕ್‌ ಪಾಂಡ್ಯ.

ಡೆತ್‌ ಓವರ್‌ ಆರಂಭಗೊಳ್ಳುತ್ತಲೇ ಅಖೀಲ್‌ ಹುಸೇನ್‌ ಪ್ರವಾಸಿಗರಿಗೆ ಬಲವಾದ ಆಘಾತವಿಕ್ಕಿದರು. ತಿಲಕ್‌ ವರ್ಮ 51 ರನ್‌ ಗಳಿಸಿ ವಾಪಸಾದರು (41 ಎಸೆತ, 4 ಬೌಂಡರಿ, 1 ಸಿಕ್ಸರ್‌). ಹಾರ್ದಿಕ್‌ ಪಾಂಡ್ಯ ಕೂಡ ನಿಲ್ಲಲಿಲ್ಲ. 24 ರನ್‌ ಮಾಡಿದ ಅವರು ಅಲ್ಜಾರಿ ಜೋಸೆಫ್ ಎಸೆತದಲ್ಲಿ ಬೌಲ್ಡ್‌ ಆದರು. ಅಕ್ಷರ್‌ ಪಟೇಲ್‌ ಗಳಿಕೆ ಕೇವಲ 14 ರನ್‌. ಅರ್ಷದೀಪ್‌ ಮತ್ತು ರವಿ ಬಿಷ್ಣೋಯಿ ಸೇರಿಕೊಂಡು ಭಾರತದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿದರು.

ಕುಲದೀಪ್‌ ಬದಲು ಬಿಷ್ಣೋಯಿ
ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿ ಕೊಂಡಿತು. ಕುಲದೀಪ್‌ ಯಾದವ್‌ ಬದಲು ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿಗೆ ಅವಕಾಶ ನೀಡಿತು. ಕುಲದೀಪ್‌ ಅಭ್ಯಾಸದ ವೇಳೆ ಕೈಗೆ ಏಟು ಮಾಡಿಕೊಂಡಿದ್ದರು. ವೆಸ್ಟ್‌ ಇಂಡೀಸ್‌ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿರ‌ಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ-7 ವಿಕೆಟಿಗೆ 152 (ತಿಲಕ್‌ ವರ್ಮ 51, ಇಶಾನ್‌ ಕಿಶನ್‌ 27, ಹಾರ್ದಿಕ್‌ ಪಾಂಡ್ಯ 24, ರೊಮಾರಿಯೊ ಶೆಫ‌ರ್ಡ್‌ 28ಕ್ಕೆ 2, ಅಲ್ಜಾರಿ ಜೋಸೆಫ್ 28ಕ್ಕೆ 2, ಅಖೀಲ್‌ ಹುಸೇನ್‌ 29ಕ್ಕೆ 2). ವೆಸ್ಟ್‌ ಇಂಡೀಸ್‌-18.5 ಓವರ್‌ಗಳಲ್ಲಿ 8 ವಿಕೆಟಿಗೆ 155 (ಪೂರಣ್‌ 67, ಹೆಟ್‌ಮೈರ್‌ 22, ಪೊವೆಲ್‌ 21, ಪಾಂಡ್ಯ 35ಕ್ಕೆ 3, ಚಹಲ್‌ 19ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next