Advertisement

ಮಾ.1ರಿಂದ 2ನೇ ಹಂತ : ಹಿರಿಯರು, ರೋಗಪೀಡಿತರಿಗೆ ಕೊರೊನಾ ಲಸಿಕೆ ನೀಡಿಕೆ

02:00 AM Feb 25, 2021 | Team Udayavani |

ಹೊಸದಿಲ್ಲಿ/ಬೆಂಗಳೂರು : ಕೊರೊನಾ ಲಸಿಕೆ ವಿತರಣೆಯ ಎರಡನೇ ಹಂತದಲ್ಲಿ 60 ವರ್ಷ ಮೀರಿದ ಮತ್ತು ಇತರ ರೋಗಗಳಿರುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಯಾರಿ ಆರಂಭವಾಗಿದೆ.

Advertisement

ಮಾ. 1ರಿಂದ ಇದು ಆರಂಭವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಬುಧವಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಬಾರಿಯ ಲಸಿಕೆ ನೀಡಿಕೆ ಪ್ರಕ್ರಿಯೆ ಒಂದಷ್ಟು ವಿಶೇಷಗಳಿಂದ ಕೂಡಿದೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಈ ಬಾರಿ ಮಾತ್ರ ಉಚಿತ ಮತ್ತು ಹಣ ನೀಡಿ ಲಸಿಕೆ ತೆಗೆದುಕೊಳ್ಳುವ ಅವಕಾಶ ಇದೆ. ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದಾಗಿದ್ದರೆ ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಹಣ ನೀಡಬೇಕು. ಪ್ರತೀ ಡೋಸ್‌ ಲಸಿಕೆಗೆ ಎಷ್ಟು ಶುಲ್ಕ ಎಂಬ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಕೇಂದ್ರ ಸಚಿವರಾದ ರವಿ ಶಂಕರ್‌ ಪ್ರಸಾದ್‌ ಮತ್ತು ಪ್ರಕಾಶ್‌ ಜಾಬ್ಡೇಕರ್‌ ತಿಳಿಸಿದ್ದಾರೆ.

ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಇದರ ವೆಚ್ಚವನ್ನು ಸರಕಾರ ಭರಿಸಲಿದೆ. ಇದಕ್ಕಾಗಿ ಸರಕಾರವೇ ಲಸಿಕೆ ಖರೀದಿಸಿ ರಾಜ್ಯ ಸರಕಾರಗಳಿಗೆ ಕಳುಹಿಸಲಿದೆ ಎಂದು ಜಾಬ್ಡೇಕರ್‌ ಹೇಳಿದ್ದಾರೆ. ಖಾಸಗಿ ಕೇಂದ್ರಗಳಲ್ಲೂ ಲಸಿಕೆ ಪಡೆಯಬಹುದು. ಇದಕ್ಕೆ ಹಣ ನೀಡಬೇಕು ಎಂದು ತಿಳಿಸಿದ್ದಾರೆ. ಈ ಹಿಂದಿನಂತೆಯೇ ಕೊವ್ಯಾಕ್ಸಿನ್‌ ಮತ್ತು ಕೊವಿಶೀಲ್ಡ್‌ಗಳಲ್ಲಿ ಜನರು ತಾವು ಇಚ್ಛಿಸಿದ ಲಸಿಕೆ ಪಡೆಯಬಹುದು.

ಶೇ. 60ರಷ್ಟು ಗುರಿ ಸಾಧನೆ
ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯಲು 7.2 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಣಿ ಯಾಗಿದ್ದರು. ಈವರೆಗೆ ಬಹುತೇಕ ಎಲ್ಲರಿಗೂ ಲಸಿಕೆ ಪಡೆಯಲು ಆಗಮಿಸುವಂತೆ ಆಹ್ವಾನಿಸ ಲಾಗಿದೆ. ಆದರೆ ಬುಧವಾರದ ಅಂತ್ಯಕ್ಕೆ 4.3 ಲಕ್ಷ ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆದಿದ್ದಾರೆ. ಈ ಮೂಲಕ ಶೇ. 60ರಷ್ಟು ಗುರಿ ಸಾಧನೆ ಯಾಗಿದೆ. ಬಾಕಿ 2.9 ಲಕ್ಷ ಆರೋಗ್ಯ ಕಾರ್ಯಕರ್ತರು ಭಯ, ಗೊಂದಲ ಮನಃಸ್ಥಿತಿ, ಮಾಹಿತಿ ಕೊರತೆಯಿಂದ ದೂರ ಉಳಿದಿ ದ್ದಾರೆ. ವಿವಿಧ ಇಲಾಖೆಗಳ ಮುಂಚೂಣಿ ಕಾರ್ಯ ಕರ್ತರಿಗೂ ಲಸಿಕೆ ನೀಡುತ್ತಿದ್ದು, ನೋಂದಣಿ ಯಾಗಿರುವ 2.9 ಲಕ್ಷ ಮಂದಿಯ ಪೈಕಿ 1.38 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ, ಶೇ. 48ರಷ್ಟು ಗುರಿ ಸಾಧನೆಯಾಗಿದೆ. ಇವರಿಗೆ ಮಾ. 6ರ ವರೆಗೆ ಲಸಿಕೆ ಪಡೆಯಲು ಅವಕಾಶವಿದೆ.

Advertisement

ಮಾ. 1ರಿಂದ ಸಾರ್ವಜನಿಕರಿಗೆ ಪೋರ್ಟಲ್‌
ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌ ಲಸಿಕೆ ವಿತರಣೆ ಮುಕ್ತಾಯವಾಗುತ್ತಿದ್ದಂತೆ ಸಾರ್ವಜನಿಕರಿಗೆ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಮಾ. 1ರಿಂದ ಕೇಂದ್ರ ಸರಕಾರವು ಸಾರ್ವಜನಿಕರ ಪೋರ್ಟಲ್‌ ಆರಂ ಭಿಸು ತ್ತದೆ. ಕೇಂದ್ರದ ಪೋರ್ಟಲ್‌ಗೆ ಸಾರ್ವಜನಿಕರ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತದೆ. ಮೊದಲು 60 ವರ್ಷ ಮೇಲ್ಪಟ್ಟವರು ಮತ್ತು ದೀರ್ಘ‌ಕಾಲದ ಅನಾರೋಗ್ಯ ಹೊಂದಿದವರಿಗೆ ಲಸಿಕೆ ನೀಡಲಾಗುತ್ತದೆ. ಈ ಹಿಂದೆ ರಾಜ್ಯ ಸರಕಾರ ಆರೋಗ್ಯ ಸಮೀಕ್ಷೆ ನಡೆಸಿ 80 ಲಕ್ಷಕ್ಕೂ ಅಧಿಕ ಮಂದಿಯನ್ನು ಗುರುತಿಸಿದ್ದು, ಇದನ್ನೇ ಪೋರ್ಟಲ್‌ಗೆ ನೀಡುವ ಸಾಧ್ಯತೆಗಳಿವೆ.

ನೋಂದಣಿ ಮೆಸೇಜ್‌ ಸಾಕು
ಲಸಿಕೆಗೆ ನೋಂದಣಿಯಾಗಿ ಪಡೆಯದಿರುವ ಆರೋಗ್ಯ ಕಾರ್ಯ ಕರ್ತರು ಗುರುವಾರ ಸಮೀಪದ ಕೊರೊನಾ ಲಸಿಕಾ ಕೇಂದ್ರ, ಶಿಬಿರಕ್ಕೆ ಬೆಳಗ್ಗೆ 8ರಿಂದ ಸಂಜೆ 6ರೊಳಗೆ ತೆರಳಿ ಲಸಿಕೆ ಪಡೆಯಬಹುದು. ಈ ವೇಳೆ ನೋಂದಣಿಯಾದ ಕುರಿತು ಮೊಬೈಲ್‌ಗೆ ಬಂದಿರುವ ಮೆಸೇಜ್‌, ಗುರುತಿನ ಚೀಟಿ ತೋರಿಸಿದರೆ ಸಾಕು ಎಂದು ಲಸಿಕೆ ಪ್ರಕ್ರಿಯೆ ವಿಭಾಗದ ಉಪನಿರ್ದೇಶಕಿ ಡಾ| ಬಿ.ಎನ್‌. ರಜನಿ ತಿಳಿಸಿದ್ದಾರೆ.

ಲಸಿಕೆ ಪಡೆಯಲು ಇಂದು ಕಡೇ ದಿನ
ಮೊದಲ ಹಂತದಲ್ಲಿ ಲಸಿಕೆ ಪಡೆಯದೆ ಇರುವ ರಾಜ್ಯದ ಎರಡೂವರೆ ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಗುರುವಾರ ಲಸಿಕೆ ಪಡೆಯಬಹುದು. ಸರಕಾರ ಇವರಿಗೆ ಕೊನೆಯ ಅವಕಾಶ ನೀಡಿದೆ. ಮುಂದೆ ಸಾಮಾನ್ಯ ಜನರಿಗೂ ಲಸಿಕೆ ನೀಡಿಕೆ ಆರಂಭವಾಗಲಿದೆ. ಇವರಿಗೆ ಆರೋಗ್ಯ ಕಾರ್ಯಕರ್ತರೇ ಲಸಿಕೆ ನೀಡಬೇಕು. ಆದರೆ ಇನ್ನೂ ಶೇ. 40ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿಲ್ಲ. ಗುರುವಾರವಾದರೂ ಮುನ್ನೆಚ್ಚರಿಕೆಯಿಂದ ಲಸಿಕೆ ಪಡೆಯಲಿ ಎಂಬುದು ಸರಕಾರದ ಆಶಯ .

ಸಾರ್ವಜನಿಕರಿಗೆ ಲಸಿಕೆ ನೀಡುವಾಗ “ವಾಕ್‌ ಇನ್‌ ಪರ್ಸನ್‌’ ಅವಕಾಶ ನೀಡಬೇಕು. ಆಗ ಸದ್ಯ ಸೋಂಕು ಪರೀಕ್ಷೆಗೆ ಹೋಗುವಂತೆ ಲಸಿಕೆ ಪಡೆಯಲು ತೆರಳಬಹುದು. ಕನಿಷ್ಠ ದಾಖಲಾತಿ ನೀಡಿ ಲಸಿಕೆ ಪಡೆದುಕೊಳ್ಳಬಹುದು.
– ಡಾ| ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next