Advertisement
ಮಹಾನಗರ: ಒಂದೆಡೆ ಚುನಾವಣ ಕರ್ತವ್ಯ, ಇನ್ನೊಂದೆಡೆ ಎಸೆಸೆಲ್ಸಿ ಫಲಿತಾಂಶ ಪ್ರಕಟವಾದಂತೆಯೇ ಪ್ರವೇಶಾತಿ ಪ್ರಕ್ರಿಯೆ ನಿರ್ವಹಣೆಯ ಜವಾಬ್ದಾರಿ. ಈ ನಡುವೆ ದ್ವಿತೀಯ ಪಿಯುಸಿ ತರಗತಿ ನಡೆಸಬೇಕಾದ ಅನಿವಾರ್ಯತೆ…
ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಹಜವಾಗಿಯೇ ಮೇ ತಿಂಗಳಿನಲ್ಲಿ ರಜೆಯ ಖುಷಿಯಲ್ಲಿರುತ್ತಾರೆ. ಈ ಸಂದರ್ಭ ಫ್ಯಾಮಿಲಿ, ಪ್ರವಾಸ ಕಾರ್ಯಕ್ರಮಗಳು ಸಾಮಾನ್ಯ. ಆದರೆ ಈಗ ಇಡೀ ಶಿಕ್ಷಕ ವರ್ಗಕ್ಕೆ ಅಸಮಾಧಾನ ಉಂಟಾಗಿದೆ. ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ ಎನ್ನುತ್ತಾರೆ ನಗರದ ಪಪೂ ಕಾಲೇಜೊಂದರ ಉಪನ್ಯಾಸಕ.
Related Articles
ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬದಲಾವಣೆಯಿದ್ದರೂ ಆರಂಭದಲ್ಲೇ ತಿಳಿಸಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ತಿಳಿಸಿದರೆ ಎಲ್ಲರಿಗೂ ತೊಂದರೆ ಯಾಗುತ್ತದೆ. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ತತ್‌ಕ್ಷಣಕ್ಕೆ ಸಿಗುವುದಿಲ್ಲ. ಬಹುತೇಕ ಬಡ ವಿದ್ಯಾರ್ಥಿಗಳು ಎರಡು ತಿಂಗಳ ರಜೆಯಲ್ಲಿ ದುಡಿಯಲು ತೆರಳಿ ಕಾಲೇಜು ಶುಲ್ಕಕ್ಕೆ ಹಣ ಸಂಗ್ರಹಿಸುತ್ತಾರೆ. ಅವಧಿಗೆ ಮುನ್ನವೇ ಕಾಲೇಜು ಆರಂಭದಿಂದ ಅವರ ಶುಲ್ಕ ಪಾವತಿಗೂ ತೊಂದರೆಯಾಗಿದೆ ಎನ್ನುತ್ತಾರೆ ಉಪನ್ಯಾಸಕರು.
Advertisement
ಸಂದೇಶ ಕಳಿಸಿದರುಮೇ 2ರಂದು ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಇಲಾಖೆ ನೀಡಿದ ಸೂಚನೆಯನ್ನು ಎಲ್ಲ ಕಾಲೇಜು ಪ್ರಮುಖರು ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿದ್ದಾರೆ. ಇಲಾಖೆ ಸುತ್ತೋಲೆ ಲಭ್ಯವಾದ ಅತ್ಯಲ್ಪ ಸಮಯದಲ್ಲೇ ಎಲ್ಲ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿ ಕಾಲೇಜು ಪುನರಾರಂಭದ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಜರಾತಿ ಪಟ್ಟಿ ಕಳುಹಿಸಿ!
ರಜೆ ಕಡಿತಗೊಳಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾಲೇಜಿಗೆ ಹಾಜರಾಗುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಬುಧವಾರ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಹಾಜರಾಗದ ಉಪನ್ಯಾಸಕರ ಹೆಸರುಗಳನ್ನು ಕಳುಹಿಸಲು ಎಲ್ಲ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಬಹುತೇಕ ಶಿಕ್ಷಕರಿಗೆ ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲದೆ ಮುಂದಿನ ಒಂದು ವಾರದೊಳಗೆ ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಎಲ್ಲ ಕೆಲಸಗಳ ಹೊಣೆ ಶಿಕ್ಷಕರ ಮೇಲಿದೆ. ಚುನಾವಣಾ ಕರ್ತವ್ಯ, ಪ್ರವೇಶಾತಿ ಪ್ರಕ್ರಿಯೆ ನಿರ್ವಹಣೆಯ ಜತೆಗೆ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳಬೇಕಾದ ಹೆಚ್ಚುವರಿ ಕೆಲಸವೂ ಈಗ ಉಪನ್ಯಾಸಕರ ಮೇಲಿದೆ. ಚುನಾವಣಾ ಕರ್ತವ್ಯಕ್ಕೆ ರವಿವಾರವೂ ತೆರಳಬೇಕಾಗಿರುವುದರಿಂದ ಸಮಯ ಹೊಂದಿಸಿಕೊಳ್ಳುವುದೇ ಉಪನ್ಯಾಸಕರಿಗೆ ಸಮಸ್ಯೆಯಾಗಿದೆ. ಈ ಹಿಂದೆ ಮೇ 20ರಂದು ತರಗತಿಗಳನ್ನು ಆರಂಭಿಸುವ ಬಗ್ಗೆ ಸುತ್ತೋಲೆ ಕಳುಹಿಸಲಾಗಿತ್ತು. ಆದರೆ ಈಗ ಮೇ 2ರಂದೇ ಆರಂಭಿಸಲು ಇಲಾಖೆ ಸೂಚಿಸಿದೆ. ಚುನಾವಣೆ ಮುಗಿದ ಬಳಿಕವೇ ತರಗತಿ ಆರಂಭ ಮಾಡುತ್ತಿದ್ದರೆ ಒತ್ತಡ ಕಡಿಮೆಯಾಗುತ್ತಿತ್ತು ಎನ್ನುತ್ತಾರೆ ಜಿಲ್ಲಾ ಪಪೂ ಕಾಲೇಜು ಪ್ರಾಂಶುಪಾಲರ ಸಂಘದ ಪದಾಧಿಕಾರಿ ರತ್ನಾಕರ ಬನ್ನಾಡಿ. ವಿದ್ಯಾರ್ಥಿಗಳ ಆಕ್ರೋಶ
ರಜೆ ಕಡಿತಗೊಳಿಸಿ ತರಗತಿ ಪುನಾರಂಭಿಸಲು ಸೂಚಿಸಿದ ಪಪೂ ಶಿಕ್ಷಣ ಇಲಾಖೆಯ ಧೋರಣೆಯನ್ನು ವಿರೋಧಿಸಿ ನಗರದ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇಲಾಖೆ ಸೂಚನೆಯನ್ನು ಪಾಲಿಸಬೇಕು ಎಂಬ ಹಿನ್ನೆಲೆಯಲ್ಲಿ ಉಪನ್ಯಾಸಕರೇ ವಿದ್ಯಾರ್ಥಿಗಳನ್ನು ಮನವೊಲಿಸಿದರು. ನಿರ್ದೇಶನಕ್ಕೆ ಬದ್ಧ
ಪ.ಪೂ. ಶಿಕ್ಷಣ ಇಲಾಖೆಯು ಏಕಾಏಕಿ ತೆಗೆದುಕೊಂಡ ನಿರ್ಧಾರಕ್ಕೆ ಇಡೀ ಪಪೂ ಉಪನ್ಯಾಸಕ ಮತ್ತು ಪ್ರಾಂಶುಪಾಲ ವರ್ಗಕ್ಕೆ ಬೇಸರವಾಗಿದೆ. ಇದು ಸಮಂಜಸ ಕ್ರಮವಲ್ಲ. ಆದರೆ ಇಲಾಖೆ ನಿರ್ದೇಶನವನ್ನು ಉಲ್ಲಂಘಿಸುವಂತಿಲ್ಲ. ಎಲ್ಲ ಕಾಲೇಜು ಪ್ರಾಂಶುಪಾಲರೂ ಇಲಾಖೆ ನೀಡಿದ ಸೂಚನೆಗೆ ಬದ್ಧರಾಗಿದ್ದಾರೆ.
– ಗಂಗಾಧರ ಆಳ್ವ,
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ,
ಪ.ಪೂ. ಪ್ರಾಂಶುಪಾಲರ ಸಂಘ