Advertisement

Lecturers Trouble: ಪಿಯು ಉಪನ್ಯಾಸಕರಿಗೆ ಪದವಿ ಕಾಲೇಜಿಗಿಲ್ಲ ಪದೋನ್ನತಿ!

12:49 AM Oct 13, 2024 | Team Udayavani |

ಮಂಗಳೂರು: ಪ್ರೌಢಶಾಲೆಯಿಂದ ಪಿಯು ಉಪನ್ಯಾಸಕರಾಗಿ ಭಡ್ತಿಗೆ ಅವಕಾಶ ಇದ್ದರೂ, ಪಿಯುಸಿಯವರಿಗೆ ಪದವಿಗೆ “ಪದೋನ್ನತಿ’ ಇನ್ನೂ ಮರೀಚಿಕೆಯಾಗಿದೆ. ಪಿಎಚ್‌ಡಿ, ನೆಟ್‌, ಸ್ಲೆಟ್‌, ಎಂ-ಫಿಲ್‌ ಪದವಿ ಹೊಂದಿರುವ ನೂರಾರು ಪಿಯು ಉಪನ್ಯಾಸಕರು ಪದವಿಗೆ ಭಡ್ತಿ ಪಡೆದಿಲ್ಲ. ರಾಜ್ಯದಲ್ಲಿ ಸುಮಾರು 500ಕ್ಕೂ ಅಧಿಕ ಉಪನ್ಯಾಸಕರು ಇಂಥ ಇಕ್ಕಟ್ಟಿಗೆ ಸಿಲುಕಿದ್ದಾರೆ.

Advertisement

ಐಎಎಸ್‌ ಅಧಿಕಾರಿ ಕುಮಾರ್‌ ನಾಯಕ್‌ ಈ ಹಿಂದೆ ಸರಕಾರಕ್ಕೆ ನೀಡಿದ್ದ ವರದಿಯಲ್ಲಿಯೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಹಾಗೂ ರಾಜ್ಯ ಅರ್ಹತಾ ಪರೀಕ್ಷೆ(ಎಸ್‌ಎಲ್‌ಇಟಿ) ಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಗಳಿಸಿದ್ದ ಪಿಯು ಉಪನ್ಯಾಸಕರು ಪದವಿ ಕಾಲೇಜುಗಳಿಗೆ ಪದೋನ್ನತಿ ಹೊಂದಲು ಅವಕಾಶ ಇದೆ ಎಂಬ ಬಗ್ಗೆ ಶಿಫಾರಸು ಮಾಡಿದ್ದರು.

ನಮಗ್ಯಾಕಿಲ್ಲ ಪದೋನ್ನತಿ?
ಪ್ರೌಢಶಾಲೆಯವರಿಗೆ ಪಿಯುಗೆ ಪದೋನ್ನತಿ ಅವಕಾಶ ಇದೆ. ಆದರೆ ಪಿಯುನಿಂದ ಪದವಿಗೆ ಪದೋನ್ನತಿ ಹೊರರಾಜ್ಯದಲ್ಲಿದ್ದು, ನಮ್ಮ ರಾಜ್ಯದಲ್ಲೂ ನೀಡಬೇಕು ಎಂದು ಶಿಫಾರಸು ಮಾಡಲಾಗಿತ್ತು.ಆದರೆ ಇಲ್ಲಿಯವರೆಗೆ ಇನ್ನೂ ಜಾರಿಯಾಗಿಲ್ಲ. ಹಲವು ಪದವಿ ಹೊಂದಿರುವ ಉಪನ್ಯಾಸಕರು ಪದೋನ್ನತಿ ಇಲ್ಲದೆ ಕೊರಗುತ್ತಿ ದ್ದಾರೆ ಎನ್ನುತ್ತಾರೆ ಮಂಗಳೂರಿನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ನಾಯಕ್‌ ರೂಪ್‌ಸಿಂಗ್‌. ಕೆಲವು ಪಿಯು ಉಪನ್ಯಾಸಕರು ಬರೆದಿರುವ ಪುಸ್ತಕಗಳು ಪದವಿ ಮಕ್ಕಳಿಗೆ ಪಾಠವಾಗಿದ್ದರೂ ಅಂಥವರಿಗೆ ಪದವಿ ಕಾಲೇಜಿಗೆ ಪದೋನ್ನತಿ ಮಾತ್ರ ಸಿಗುತ್ತಿಲ್ಲ!

ಪದೋನ್ನತಿ ಪ್ರಸ್ತಾವ ಇಲ್ಲ
ಪಿಯು ಉಪನ್ಯಾಸಕರನ್ನು ಪದವಿಗೆ ಪದೋನ್ನತಿ ಮಾಡುವ ಕುರಿತ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ. ಕುಮಾರ್‌ ನಾಯಕ್‌ ವರದಿ ಬಗ್ಗೆ ಅವಲೋಕನ ಮಾಡಿಲ್ಲ. ಪರಿಶೀಲಿಸಲಾಗುವುದು.
ಜಗದೀಶ್‌ ಜಿ., ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

“ಅನೇಕ ರಾಜ್ಯಗಳಲ್ಲಿ ಪಿಯುನಿಂದ ಪದವಿಗೆ ಪದೋನ್ನತಿ ನೀಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಇದಕ್ಕೆ ಅವಕಾಶ ಇಲ್ಲ. ಕುಮಾರ ನಾಯಕ್‌ ವರದಿಯಲ್ಲೂ ಶಿಫಾರಸು ಮಾಡಲಾಗಿತ್ತು. ನೂರಾರು ಉಪನ್ಯಾಸಕರು ಪದೋನ್ನತಿಗೆ ಅರ್ಹರಿದ್ದು, ಅವರಿಗೆ ಭಡ್ತಿ ದೊರೆಯಬೇಕು.” – ಜಯಾನಂದ ಎನ್‌, ಸುವರ್ಣ, ಅಧ್ಯಕ್ಷರು, ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘ

Advertisement

ಏನಿದು ವರದಿ?
ಪಿಯು, ಪದವಿ ಪ್ರತ್ಯೇಕಗೊಂಡ ಅನಂತರ ಪದೋನ್ನತಿ ವಿಷಯ ಮುನ್ನೆಲೆಗೆ ಬಂದಿತ್ತು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, 15 ವರ್ಷಗಳ ಸೇವೆ ಪೂರೈಸಿರುವ ಹಾಗೂ ಬೋಧನಾ ವಿಷಯದಲ್ಲಿ ಶೇ.55ರಷ್ಟು ಅಂಕ ಗಳಿಸಿ ಎನ್‌ಇಟಿ/ಎಸ್‌ಎಲ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಉಪನ್ಯಾಸಕರಿಗೆ ಪದವಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಭಡ್ತಿ ನೀಡಲು ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖೆಯ ವೃಂದ ಹಾಗೂ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಹಿಂದಿನ ಕಾರ್ಯದರ್ಶಿ ಕುಮಾರ್‌ ನಾಯಕ್‌ ಅವರು 2011ರಲ್ಲಿ ಸರಕಾರಕ್ಕೆ ನೀಡಿದ ವರದಿಯಲ್ಲಿ ಶಿಫಾರಸು ಮಾಡಿದ್ದರು. ಆದರೆ ಈ ವರದಿ ಜಾರಿಗೆ ಸರಕಾರ ಇನ್ನೂ ಮನಸ್ಸು ಮಾಡದಿರುವುದು ಟೀಕೆಗೆ ಗುರಿಯಾಗಿದೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next