Advertisement

EXAM: ದ್ವಿತೀಯ ಪಿಯು ಮಕ್ಕಳಿಗೆ ಬೇರೆ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ!

01:39 AM Oct 04, 2024 | Team Udayavani |

ಬೆಂಗಳೂರು: “ಪ್ರಾಯೋಗಿಕ ಪರೀಕ್ಷಾ ಕೇಂದ್ರ’ವೆಂದು ಗುರುತಿಸಲ್ಪಟ್ಟ ಕಾಲೇಜಿನ ವಿದ್ಯಾರ್ಥಿಗಳು ಅದೇ ಕೇಂದ್ರದಲ್ಲಿ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಯನ್ನು ತೆಗೆದುಕೊಳ್ಳುವಂತಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಆದರೆ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಈ ಸುತ್ತೋಲೆ ಹಿಂಪಡೆದು ಹಿಂದಿನಂತೆ ಆಯಾ ಕಾಲೇಜುಗಳಲ್ಲೇ ಬಾಹ್ಯ ಪರೀಕ್ಷಾ ವೀಕ್ಷಕರ ಮೂಲಕ ನಡೆಸುವಂತೆಯೂ ಆಗ್ರಹಿಸಿದೆ.

Advertisement

2025ನೇ ಸಾಲಿನ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಶಿಫಾರಸು ಮಾಡುವ ಜವಾಬ್ದಾರಿಯು ಆಯಾ ಜಿಲ್ಲಾ ಹಂತದ ಉಪನಿರ್ದೇಶಕರಿಗೆ ಇರಲಿದ್ದು, ಈ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಯಾದೃಚ್ಛಿಕರಿಸಿ (ರ್‍ಯಾಂಡಮೈಸ್‌) ಪ್ರಾಯೋಗಿಕ ಪರೀಕ್ಷೆ ಕೇಂದ್ರಗಳನ್ನು ಹಂಚಿಕೆ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ 5311 ಪಿಯು ಕಾಲೇಜುಗಳಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ರಾಜ್ಯಾದ್ಯಂತ ವಿಜ್ಞಾನ ವಿಷಯ ತೆಗೆದುಕೊಂಡವರಿದ್ದಾರೆ. ಬಹುತೇಕ ಅವರೆಲ್ಲರೂ ಪ್ರಾಯೋಗಿಕ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ.

ವಿದ್ಯಾರ್ಥಿಗಳ ಯಾದೃಚ್ಛಿಕರಣ
ಪ್ರಾಯೋಗಿಕ ಪರೀಕ್ಷಾ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಳ್ಳುವಂತಿಲ್ಲ. ಆ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು.

ಪ್ರಾಯೋಗಿಕ ಪರೀಕ್ಷೆ ಇರುವ ಎಲ್ಲ ವಿಷಯಗಳ ಪ್ರಾಯೋಗಿಕ ಪಠ್ಯಕ್ರಮ ದಂತೆ ಎಲ್ಲ ಪ್ರಯೋಗಗಳನ್ನು ವಿದ್ಯಾರ್ಥಿಗಳಿಗೆ ಮಾಡಿಸಿ ಅವkನ್ನು ಪ್ರಾಯೋಗಿಕ ಪರೀಕ್ಷೆಗೆ ತರಬೇತುಗೊಳಿಸುವುದು ಅವರ ಉಪನ್ಯಾಸಕರ ಕರ್ತವ್ಯ. ಈ ವಿಷಯವನ್ನು ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರಿಗೆ ತಿಳಿಸಿ ಜಾಗೃತಿ ಮೂಡಿಸಬೇಕು. ಈ ಸಂಬಂಧ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ತಮ್ಮ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಮಂಡಳಿಯ ಆದೇಶಕ್ಕೆ ಖಾಸಗಿಳ ಒಕ್ಕೂಟ ಕುಪ್ಮಾ ವಿರೋಧ
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಯಾವುದೇ ಚರ್ಚೆ ನಡೆಸದೆ ಕೈಗೊಂಡಿರುವ ಈ ನಿರ್ಣಯ ಅವೈಜ್ಞಾನಿಕವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಗೂ ವಿರುದ್ಧವಾಗಿದೆ ಎಂದು ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಿಂದೆ ಶೈಕ್ಷಣಿಕ ವರ್ಷದ ಪ್ರಾಯೋಗಿಕ ಪರೀಕ್ಷೆಗಳನ್ನು ಆಯಾ ಕಾಲೇಜು ಉಸ್ತುವಾರಿಯಲ್ಲಿ ಬಾಹ್ಯ ಪರೀಕ್ಷಾ ವೀಕ್ಷಕರು ಸುಸೂತ್ರವಾಗಿ ನಡೆಸಿಕೊಂಡು ಬಂದಿದ್ದಾರೆ. ಪ್ರಾಯೋಗಿಕ ಪರೀಕ್ಷೆಯನ್ನು ಬೇರೆ ಕೇಂದ್ರಗಳಲ್ಲಿ ಬರೆಯುವುದರಿಂದ ವಿದ್ಯಾರ್ಥಿಗಳಿಗೆ ಅನಗತ್ಯ ಸಮಯ ವ್ಯರ್ಥವಾಗಲಿದೆ. ಕೆಲವೆಡೆ ಪರೀಕ್ಷೆ ನಡೆಯಲು ಮೂಲಸೌಕರ್ಯಗಳು, ಪ್ರಯೋಗಾಲಯಕ್ಕೆ ಬೇಕಾದ ಕೊರತೆ ಇದೆ. ಹಾಗಾಗಿ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

Advertisement

ಕುಪ್ಮಾ ಆಕ್ಷೇಪಗಳೇನು?
– ಶೈಕ್ಷಣಿಕ ವರ್ಷದ ಮಧ್ಯದದಲ್ಲಿ ಚರ್ಚಿಸದೆ ತೆಗೆದುಕೊಳ್ಳುವ ಇಂತಹ ನಿರ್ಣಯಗಳು ವಿದ್ಯಾರ್ಥಿಗಳ ಹಿತಕ್ಕೆ ವಿರುದ್ಧವಾಗಿರುತ್ತವೆ.
-ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಇದು ಆಘಾತ ನೀಡಿದೆ.
-ವಿದ್ಯಾರ್ಥಿಗಳ ಹೆಸರು ಆಲ್ಫಾಬೆಟ್‌ ಪ್ರಕಾರ ಆಯ್ಕೆಯಾಗಿರುತ್ತದೆ. ಟೇಬಲ್‌, ರಿಜಿಸ್ಟರ್‌ ನಂಬರ್‌ ನಮೂದು ಸೇರಿದಂತೆ ಇಡೀ ವ್ಯವಸ್ಥೆ ಬದಲಿಸಬೇಕಾಗುತ್ತದೆ.
– ಇತರ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆ ತಪ್ಪಿದ್ದಲ್ಲ. ಇದೇ ಸಮಯದಲ್ಲಿ ಜೆಇಇ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆ ಕೂಡ ಇರುವುದರಿಂದ ಸಮಸ್ಯೆ ಹೆಚ್ಚಲಿದೆ.
– ಎಲ್ಲಕ್ಕಿಂತ ಮಿಗಿಲಾಗಿ ಪರೀಕ್ಷಾ ಕೇಂದ್ರ ಬದಲಿಸುವುದರಿಂದ ವಿದ್ಯಾರ್ಥಿಗಳ ಪ್ರಯಾಣ, ಊಟ-ತಿಂಡಿ ಸೇರಿದಂತೆ ಎಲ್ಲಕ್ಕೂ ಸಮಸ್ಯೆ ಆಗಲಿದೆ.
-ಹೊರಗಿನ ಪರೀಕ್ಷಾ ಕೇಂದ್ರಗಳ ಪ್ರಯೋಗಾಲಯಗಳಲ್ಲಿ ನಮ್ಮಲ್ಲಿ ಇದ್ದಂತೆ ಮೂಲಸೌಕರ್ಯಗಳು, ಉಪಕರಣಗಳು ಇಲ್ಲದೆಯೂ ಇರಬಹುದು.

ಏನಿದು ಆದೇಶ ?
-ಪ್ರಾಯೋಗಿಕ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆಯನ್ನು ತೆಗೆದುಕೊಳ್ಳುವಂತಿಲ್ಲ
-ಜಿಲ್ಲಾ ಹಂತದ ಉಪನಿರ್ದೇಶಕರಿಗೆ 2025ನೇ ಸಾಲಿನ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಗುರುತಿಸುವ ಜವಾಬ್ದಾರಿ
-ವಿದ್ಯಾರ್ಥಿಗಳನ್ನು ರ್‍ಯಾಂಡಮ್‌ ಆಗಿ ವರ್ಗೀಕರಿಸಿ, ಪರೀಕ್ಷಾ ಕೇಂದ್ರಗಳಿಗೆ
ಹಂಚಿಕೆ ಮಾಡುವಂತೆ ಸೂಚನೆ

ಬಾಹ್ಯ ಪರೀಕ್ಷಾ ವೀಕ್ಷಕರ ಮೂಲಕ ಇಷ್ಟು ವರ್ಷ ಸುಸೂತ್ರವಾಗಿ ಆಯಾ ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿಯೇ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ. ಶೈಕ್ಷಣಿಕ ವರ್ಷ ಮಧ್ಯದಲ್ಲಿ ಮಂಡಲಿಯ ಈ ನಿರ್ಣಯ ಅತ್ಯಂತ ಅವೈಜ್ಞಾನಿಕ. ಈ ಸುತ್ತೋಲೆಯನ್ನು ಹಿಂಪಡೆಯಬೇಕು.
– ಡಾ| ಎಂ. ಮೋಹನ ಆಳ್ವ, ಕುಪ್ಮಾ ಅಧ್ಯಕ್ಷ

ಪೂರ್ವತಯಾರಿ, ಸಲಹೆ, ಸೂಚನೆ, ಚರ್ಚೆ ಇಲ್ಲದೆ ಮಂಡಲಿ ತೆಗೆದುಕೊಂಡಿರುವ ಈ ನಿರ್ಣಯ ವಿದ್ಯಾರ್ಥಿಗಳು, ಪೋಷಕರಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಇದೊಂದು ಅವೈಜ್ಞಾನಿಕ ಸುತ್ತೋಲೆ. ಹಿಂಪಡೆಯದಿದ್ದರೆ ಗೊಂದಲ ಮುಂದುವರಿಯುತ್ತದೆ.
– ಪ್ರೊ| ನರೇಂದ್ರ ಎಲ್‌. ನಾಯಕ್‌, ಕುಪ್ಮಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next