Advertisement

ಏಪ್ರಿಲ್‌ ಅಂತ್ಯಕ್ಕೆ ದ್ವಿತೀಯ ಪಿಯು ಫ‌ಲಿತಾಂಶ!

12:37 PM Mar 21, 2018 | |

ಬೆಂಗಳೂರು: ಇತ್ತೀಚೆಗಷ್ಟೇ ಪೂರ್ಣಗೊಂಡಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾ.26ರಂದು ಆರಂಭವಾಗಲಿದೆ. ಏಪ್ರಿಲ್‌ ಕೊನೆಯ ವಾರದಲ್ಲಿ ಫ‌ಲಿತಾಂಶ ಪ್ರಕಟಿಸಲಿದ್ದೇವೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದರು.

Advertisement

ಮಲ್ಲೇಶ್ವರದ ಪಿಯು ಇಲಾಖೆಯಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೌಲ್ಯಮಾಪನ ಕಾರ್ಯಕ್ಕೆ 3,779 ಉಪಮುಖ್ಯ ಮೌಲ್ಯಮಾಪಕರು, 20,11 ಸಹಾಯಕ ಮೌಲ್ಯಮಾಪಕರು ಸೇರಿ 23,890 ಉಪನ್ಯಾಸಕ ಮತ್ತು ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ಕಳುಹಿಸಲಾಗಿದೆ. ಮಾ.26ರಿಂದ ಮೌಲ್ಯಮಾಪನ ನಡೆಯಲಿದ್ದು, 15 ದಿನದೊಳಗೆ ಮೌಲ್ಯಮಾಪನ ಮುಗಿಯಲಿದೆ. ಏಪ್ರಿಲ್‌ ಕೊನೆಯ ವಾರ ಫ‌ಲಿತಾಂಶ ನೀಡಲಿದ್ದೇವೆ ಎಂದರು.

ರಾಜ್ಯದ 4,725 ಪಿಯು ಕಾಲೇಜಿನ 6,90,150 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪ್ರತಿ ಪರೀಕ್ಷೆಗೆ ಸರಾಸರಿ ಶೇ.1-2 ವಿದ್ಯಾರ್ಥಿಗಳು ಗೈರಾಗಿದ್ದರು. ಕಲಬುರಗಿಯಲ್ಲೂ ಮೌಲ್ಯಮಾಪನ ಕೇಂದ್ರ ತೆರೆದಿದ್ದೇವೆ. ಬೆಂಗಳೂರಿನಲ್ಲಿ 23, ಮೈಸೂರಿನಲ್ಲಿ 8, ಧಾರವಾಡದಲ್ಲಿ 3, ಶಿವಮೊಗ್ಗ, ದಾವಣಗೆರೆ, ಕಲಬುರಗಿಯಲ್ಲಿ ತಲಾ 2, ಮಂಗಳೂರಿನಲ್ಲಿ 7 ಹಾಗೂ ಬೆಳಗಾವಿಯಲ್ಲಿ 6 ಸೇರಿ 53 ಮೌಲ್ಯಮಾಪನ ಕೇಂದ್ರ ನಿಗದಿ ಮಾಡಿದ್ದೇವೆ ಎಂಬ ಮಾಹಿತಿ ನೀಡಿದರು.

ಪರೀûಾ ಕೇಂದ್ರದ ರ್‍ಯಾಂಡಮೈಜೇಷನ್‌, ಸಿಸಿ ಕ್ಯಾಮರಾ, ಮೇಲ್ವಿಚಾರಕ ಸಿಬ್ಬಂದಿಗೆ ಗುರುತಿನ ಚೀಟಿ, ಪ್ರಶ್ನೆಪತ್ರಿಕೆ ವಿತರಣೆ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಮಾಡಿದ್ದರಿಂದ ಪರೀಕ್ಷಾ ಅಕ್ರಮ ಕಡಿಮೆಯಾಗಿದೆ. ಕೇವಲ 16 ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ. ಮಾ.23ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಲಿದ್ದು,  ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದರು.

ಪೂರಕ ಪರೀಕ್ಷೆ: ಸಿಇಟಿ ಮತ್ತು ನೀಟ್‌ ಬರೆಯುವ ವಿದ್ಯಾರ್ಥಿಗಳಿಗೆ ಸಹಯವಾಗುವಂತೆ ಮೇ ಕೊನೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸಲಿದ್ದೇವೆ. ಉತ್ತರ ಪತ್ರಿಕೆಗಳ ಪ್ರತಿ, ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Advertisement

ಭೌತಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಇದ್ದ ಗೊಂದಲಮಯ ಪ್ರಶ್ನೆಯೊಂದಕ್ಕೆ ಉತ್ತರಿಸಲು ಪ್ರಯತ್ನಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ತಜ್ಞರ ಸಮಿತಿ ಅಭಿಪ್ರಾಯದಂತೆ 5 ಅಂಕ ನೀಡಲಾಗುತ್ತದೆ. ಸಮಿತಿ ಸೂಚನೆ ನೀಡಿದರೆ,  ಇಂಗ್ಲಿಷ್‌ ವಿಷಯದಲ್ಲೂ ಗ್ರೇಸ್‌ ಅಂಕ ನೀಡುತ್ತೇವೆ. ಮುಂದಿನ ವರ್ಷದಿಂದ ಪ್ರಶ್ನೆಪತ್ರಿಕೆ ಅಂತಿಮವಾದ ಬಳಿಕ ಅದರ ಲೋಪದೋಷ ತಿದ್ದಲು (ಪ್ರೂಫ್‌ರೀಡ್‌) ಉನ್ನತ ಮಟ್ಟದ ಸಮಿತಿ ರಚಿಸಲಿದ್ದೇವೆ.
-ತನ್ವೀರ್‌ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ

ವೇತನ ತಾರತಮ್ಯ – ಇಂದು ಸಂಧಾನ ಸಭೆ: ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾ.22ರಿಂದ ಮೌಲ್ಯಮಾಪನ ಬಹಿಷ್ಕಾರ ಮತ್ತು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪಿಯು ಉಪನ್ಯಾಸಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಜತೆ ಮಾತುಕತೆ ನಡೆಸಿ, ಸುಗಮ ಮೌಲ್ಯಮಾಪನಕ್ಕೆ ಸಹಕರಿಸುವಂತೆ ಸಚಿವ ಸೇಠ್ ಬುಧವಾರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಉಪನ್ಯಾಸಕರ ಬೇಡಿಕೆಗಳ ಕುರಿತು 6ನೇ ವೇತನ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಮುಷ್ಕರ ನಡೆಸುವವರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ 1983ರಡಿ ಕಾನೂನು ಕ್ರಮ ಮತ್ತು ಮೌಲ್ಯಮಾಪನಕ್ಕೆ ಭಾಗಿಯಾಗುವ ಸಿಬ್ಬಂದಿಗೆ ತೊಂದರೆ ನೀಡುವ ವ್ಯಕ್ತಿಗಳಿಗೆ 5 ಲಕ್ಷ ರೂ. ದಂಡ ಮತ್ತು 5 ವರ್ಷ ಸೆರೆವಾಸ ವಿಧಿಸುವ ಅವಕಾಶವಿದೆ. ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next