ನವದೆಹಲಿ: 2024 ರ ಐಪಿಎಲ್ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಮಾ.22 ರಂದು ಐಪಿಎಲ್ ಕೂಟಕ್ಕೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ.
ಕಳೆದ ತಿಂಗಳು ಬಿಸಿಸಿಐ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಅನೌನ್ಸ್ ಮಾಡಿದೆ. ಉಳಿದ ಪಂದ್ಯಗಳು ಯಾವಾಗಿನಿಂದ ಹಾಗೂ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.
ಇದೀಗ ದ್ವಿತೀಯಾರ್ಧ ಪಂದ್ಯಗಳು ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ವರದಿಯೊಂದು ಬಂದಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕಾರಣದಿಂದ ಬಿಸಿಸಿಐ ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿದೆ.
ಐಪಿಎಲ್‌ನ ದ್ವಿತೀಯಾರ್ಧವನ್ನು ಗಲ್ಫ್ ದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕೆಲ ಬಿಸಿಸಿಐ ಅಧಿಕಾರಿಗಳ ಯುಎಇಯಲ್ಲಿ ಇದ್ದಾರೆ. ಶನಿವಾರ(ಮಾ.16 ರಂದು) ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಣೆಯಾದ ಬಳಿಕ ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ತಿಳಿಸಿದೆ.
“ಚುನಾವಣಾ ಆಯೋಗವು ಶನಿವಾರ(ಮಾ.16 ರಂದು) ಮಧ್ಯಾಹ್ನ 3 ಗಂಟೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಅದರ ನಂತರ ಬಿಸಿಸಿಐ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಬೇಕೆ ಎಂದು ನಿರ್ಧರಿಸುತ್ತದೆ. ಪ್ರಸ್ತುತ, ಕೆಲವು ಬಿಸಿಸಿಐ ಅಧಿಕಾರಿಗಳು ದ್ವಿತೀಯಾರ್ಧವನ್ನು ಆಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲು ದುಬೈನಲ್ಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.
ಕೆಲವು ಫ್ರಾಂಚೈಸಿಗಳು ಈಗಾಗಲೇ ತಮ್ಮ ಪಾಸ್‌ಪೋರ್ಟ್‌ಗಳನ್ನು ಸಲ್ಲಿಸುವಂತೆ ಆಟಗಾರರನ್ನು ಕೇಳಿವೆ ಎಂಬ ವರದಿ ತಿಳಿಸಿದೆ.
ಮಾ. 22 ರಂದು ಚೆನ್ನೈ ಹಾಗೂ ಆರ್ ಸಿಬಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಏ. 7 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲಾರ್ಧದ ಕೊನೆಯ ಪಂದ್ಯ ನಡೆಯಲಿದೆ.