ರಾಯಚೂರು: ಸರ್ಕಾರ 15-18 ವರ್ಷದವರೆಗೆ ಕೋವಿಡ್ ಲಸಿಕೆ ಹಾಕಲು ಆರಂಭಿಸಿದ್ದು, ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದ ವೇಗ ಕಂಡು ಬರುತ್ತಿಲ್ಲ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಶಾಲೆ ಬಿಟ್ಟ ಮಕ್ಕಳ ಹುಡುಕಾಟದ ಹೆಚ್ಚುವರಿ ಕೆಲಸ ಶುರುವಾಗಿದೆ.
ಜಿಲ್ಲೆಯಲ್ಲಿ 1.14 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ ಶೇ.47ರಷ್ಟು ಮಾತ್ರ ಗುರಿ ಸಾಧನೆ ಆಗಿದೆ. ಅಂದರೆ ಕಳೆದ ಮೂರು ದಿನಗಳಲ್ಲಿ ಅರ್ಧಕ್ಕಿಂತ ಕಡಿಮೆ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮಕ್ಕಳ ಸಂಖ್ಯೆ, ವಿವರ ಸುಲಭವಾಗಿ ಸಿಗುವುದರಿಂದ ಈ ಕೆಲಸ ತ್ವರಿತಗತಿಯಲ್ಲಿ ನಡೆಯಬಹುದು ಎಂದೇ ಅಂದಾಜಿಸಲಾಗಿತ್ತು.
ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ, ಈ ಭಾಗದಲ್ಲಿ ಯಾವ ವಯಸ್ಸಿನವರಿಗೆ ಲಸಿಕೆ ನೀಡಬೇಕಾದರೂ ಪ್ರಯಾಸ ಪಡಲೇಬೇಕು ಎನ್ನುವ ಪರಿಸ್ಥಿತಿ ಇದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಈ ಕೆಲಸ ಮಾಡುತ್ತಿದ್ದು, ಶಾಲೆ, ಕಾಲೇಜುಗಳಿಗೆ ಹಾಜರಾಗುವ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದೆ. ಶಾಲೆಗೆ ಬರಲಾರದ ಪಾಲಕರಿಗೆ ಕರೆ ಮಾಡಿ ಕೂಡಲೇ ಲಸಿಕೆ ಹಾಕಿಸಲು ಸೂಚನೆ ಕೂಡ ನೀಡಲಾಗಿದೆ. ಅದರಂತೆ ಅನೇಕರು ಸ್ವಪ್ರೇರಣೆಯಿಂದ ಲಸಿಕೆ ಹಾಕಿಸಲು ಮುಂದೆ ಬರುತ್ತಿದ್ದಾರೆ. ಕೆಲವೆಡೆ ಪಾಲಕರೇ ಮುಂದೆ ನಿಂತು ಮಕ್ಕಳಿಗೆ ಲಸಿಕೆ ಹಾಕಿಸುತ್ತಿದ್ದಾರೆ.
ಆದರೆ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಬಹುತೇಕ ಕಡೆ ಶಾಲೆ ಬಿಟ್ಟ ಮಕ್ಕಲ ಸಂಖ್ಯೆ ಹೆಚ್ಚಾಗಿದ್ದು, ಅವರಿಗಾಗಿ ಹುಡುಕಾಟ ಶುರುವಾಗಿದೆ. ಹೇಳಿ ಕಳುಹಿಸಿದರೂ ಮಕ್ಕಳು ಶಾಲೆ ಕಡೆ ಬರುತ್ತಿಲ್ಲ. ಇದು ಅಧಿ ಕಾರಿಗಳಿಗೆ ಕಿರಿ-ಕಿರಿ ಉಂಟು ಮಾಡುತ್ತಿದೆ. ಗುಳೆ ಸಮಸ್ಯೆ: ಇನ್ನೂ ಗ್ರಾಮೀಣ ಭಾಗದಲ್ಲಿ ಮಕ್ಕಳು 14-15 ವರ್ಷ ವಯಸ್ಸಾಗುತ್ತಿದ್ದಂತೆ ಬೇರೆ-ಬೇರೆ ನಗರಗಳಿಗೆ ಗುಳೆ ಹೋಗುವ ಪದ್ಧತಿ ಇಂದಿಗೂ ಜೀವಂತವಿದೆ. ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆ ಬೆಂಗಳೂರು, ಹೈದರಾಬಾದ್, ಮುಂಬೈ, ಪುಣೆ ಸೇರಿದಂತೆ ವಿವಿಧ ಮಹಾನಗರಗಳಿಗೆ ಗುಳೆ ಹೋಗುತ್ತಾರೆ.
ಅದರಲ್ಲೂ ದೇವದುರ್ಗ, ಲಿಂಗಸಗೂರು ತಾಲೂಕಿನ ತಾಂಡಾಗಳಲ್ಲಿ ವಲಸೆ ಪದ್ಧತಿ ಹೆಚ್ಚಾಗಿದೆ. ಈಗ ಶಿಕ್ಷಕರು ಮಕ್ಕಳ ಮಾಹಿತಿ ಪಡೆದು ಪಾಲಕರಿಗೆ ಕರೆ ಮಾಡಿ ಹೇಳುತ್ತಿದ್ದಾರೆ. ಸಾಧ್ಯವಾದರೆ ಅವರು ಇರುವ ಕಡೆಯೇ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಲು ತಿಳಿ ಹೇಳುತ್ತಿದ್ದಾರೆ. ಇನ್ನೂ ಈಗ ಹತ್ತಿ ಬಿಡಿಸುವ ಕೆಲಸಕ್ಕೆ ಮಕ್ಕಳನ್ನೆ ಕರೆದು ಹೋಗಲಾಗುತ್ತಿದೆ. ಕೆಲಸಕ್ಕೆ ಹೋದ ಮಕ್ಕಳಿಗಾಗಿ ಕಾದು ಕುಳಿತು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಲಾಗುತ್ತಿದೆ.
ಶಾಲೆಗಳಿಗೆ ಬರುವ ಸಿಬ್ಬಂದಿ: ವ್ಯಾಕ್ಸಿನೇಶನ್ ಹಾಕಿಸಲು ಜಿಲ್ಲೆಯಲ್ಲಿ 66 ಕೇಂದ್ರಗಳನ್ನು ಗುರುತಿಸಲಾಗಿದೆ. ಅದರ ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಲು ಶಾಲೆಗಳಿಗೆ ಬರುತ್ತಿದ್ದಾರೆ. ಆದರೆ, ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ಕಡ್ಡಾಯವಿರುವ ಮಕ್ಕಳಿಗೆ ಒಂದೇ ದಿನದಲ್ಲಿ ಲಸಿಕೆ ನೀಡಲಾಗಿದೆ. ಈಗ ನಿತ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಬಂದು ಕುಳಿತರೂ ಲಸಿಕೆ ಪಡೆಯಲು ಮಕ್ಕಳೇ ಇರುವುದಿಲ್ಲ ಎನ್ನುವ ಸ್ಥಿತಿ ಇದೆ.