Advertisement

ಶಾಂತಿನಗರ ಸುತ್ತಮುತ್ತ ಸೀಲ್‌ಡೌನ್‌ ಮತ್ತಷ್ಟು ಬಿಗಿ

12:59 PM May 02, 2020 | Suhan S |

ಹುಬ್ಬಳ್ಳಿ: ಇಲ್ಲಿನ ಶಾಂತಿನಗರದ ನಿವಾಸಿಯೊಬ್ಬರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸೀಲ್‌ಡೌನ್‌ ಮತ್ತಷ್ಟು ಬಿಗಿಗೊಳಿಸಲಾಗಿದೆ. ನಾಕಾಬಂಧಿ ಹಾಗೂ ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಸಲಾಗುತ್ತಿದೆ.

Advertisement

ಕೇಶ್ವಾಪುರದ ಆಜಾದ್‌ ಕಾಲೋನಿ ಓರ್ವ ಬಾಲಕಿಯಲ್ಲಿ ಕೆಲದಿನಗಳ ಹಿಂದೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ರಮೇಶ ಭವನ, ಬದಾಮಿ ನಗರ, ಮಧುರ ಕಾಲೋನಿ, ಪಾಸ್ವಾಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್‌ ವಲಯ ವ್ಯಾಪ್ತಿಗೆ ಸೇರಿಸಲಾಗಿತ್ತು. ಸುತ್ತಲಿನ 1 ಕಿಮೀ ವ್ಯಾಪ್ತಿಯನ್ನು ತೀವ್ರ ಬಫರ್‌ ವಲಯ ಎಂದು ಗುರುತಿಸಿ ನಾಕಾಬಂಧಿ ಹಾಗೂ ಚೆಕ್‌ಪೋಸ್ಟ್‌ ನಿರ್ಮಿಸಲಾಗಿತ್ತು. ಇದೀಗ ಇದೇ ವ್ಯಾಪ್ತಿಯಲ್ಲಿ ಮತ್ತೂಂದು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಪ್ರದೇಶಗಳಲ್ಲಿನ ಸೀಲ್‌ಡೌನ್‌ ಮತ್ತಷ್ಟು ಬಿಗಿಗೊಳಿಸಲಾಗಿದೆ.

ಶಾಂತಿ ನಗರದ ನಿವಾಸಿಯೊಬ್ಬರು ಜ್ವರ, ಕೆಮ್ಮು ಕಾರಣದಿಂದ ಆಸ್ಪತ್ರೆಗೆ ತೆರಳಿ ತಪಾಸಣೆ ನಂತರ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಈ ಕುರಿತು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದ್ದು, ಸೋಂಕಿತನ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದ್ದು, ಸೋಂಕಿತ ವ್ಯಕ್ತಿಯ ಪ್ರಯಾಣದ ಮಾಹಿತಿ ಜಿಲ್ಲಾಡಳಿತದಿಂದ ಹೊರ ಬೀಳಬೇಕಾಗಿದೆ.

ಶಾಂತಿ ನಗರದ ನಿವಾಸಿಯೊಬ್ಬರಲ್ಲಿ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರದ ಬಹುತೇಕ ಭಾಗ ಇದೀಗ ಕಂಟೈನ್ಮೆಂಟ್‌ ವ್ಯಾಪ್ತಿಗೆ ಒಳಗಾಗಿದೆ. ಆಜಾದ್‌ ನಗರದಿಂದ ಒಂದಿಷ್ಟು ಮುಂದೆ ಹೋಗಿ ಶಾಂತಿ ನಗರದಲ್ಲಿ ಮತ್ತೂಂದು ಸೋಂಕು ಪ್ರಕರಣ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಸೋಂಕಿತ ವ್ಯಕ್ತಿ ಯಾರು, ಎಲ್ಲೆಲ್ಲಿ ತಿರುಗಾಡಿದ್ದು, ಅವರ ಟ್ರಾವೆಲ್‌ ಹಿಸ್ಟರಿ ಏನಿದೆ ಎಂಬುದು ಜನರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಸೋಂಕಿತನ ಮನೆಯಿಂದ ಬಫರ್‌ ಜೋನ್‌ ಗಳ ಕೊನೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿದೆ. ಪ್ರಮುಖ ರಸ್ತೆಗಳಷ್ಟೇ ಅಲ್ಲದೆ ಸಣ್ಣ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದೆ. ಶಾಂತಿ ನಗರದ ಸುತ್ತಲಿನ 100 ಮೀಟರ್‌ ನಿಯಂತ್ರಿತ ಪ್ರದೇಶವೆಂದು ಘೋಷಿಸಿ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದ್ದು, ಕೇಶ್ವಾಪುರದ ಸರ್ವೋದಯ ವೃತ್ತದಿಂದ ರಮೇಶ ಭವನದ ವರೆಗಿನ ರಸ್ತೆಯನ್ನು ಈಗಾಗಲೇ ಸಂಪೂರ್ಣ ಬಂದ್‌  ಮಾಡಲಾಗಿದ್ದು, ಮತ್ತಷ್ಟು ಬಿಗಿಗೊಳಿಸಲಾಗಿದೆ. ಇನ್ನೂ ಈ ಪ್ರದೇಶದ ಜನರು ಹೊರಬರದಂತೆ ಕಟ್ಟೆಚ್ಚರ ವಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next