Advertisement

ಸೀ ವಾಕ್‌ ಆಗಲಿವೆ ಇನ್ನೆರಡು ಬ್ರೇಕ್‌ ವಾಟರ್‌

09:26 AM Nov 13, 2018 | Team Udayavani |

ಗಂಗೊಳ್ಳಿ: ಕಡಲ್ಕೊರೆತ ತಡೆಗೆ ಗಂಗೊಳ್ಳಿ ಹಾಗೂ ಕೋಡಿಯಲ್ಲಿ ನಿರ್ಮಿಸಿರುವ ಬ್ರೇಕ್‌ ವಾಟರನ್ನು ಮಲ್ಪೆ ಮಾದರಿಯಲ್ಲಿ ಸೀ ವಾಕ್‌ ಆಗಿ ಪರಿವರ್ತಿಸುವ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

Advertisement

ಬಂದರು ಮತ್ತು ಮೀನುಗಾರಿಕೆ ಇಲಾಖೆಗಳು ಇದಕ್ಕೆ ಸಹಕಾರ ನೀಡಲಿವೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಈಗಾಗಲೇ ಇಲಾಖೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಹಾಗೂ ಕೋಡಿಯಲ್ಲಿ ನಿರ್ಮಾಣವೂ ಇದರ ಒಂದು ಭಾಗ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವೆನ್ನುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 102 ಕೋ.ರೂ. ವೆಚ್ಚದಲ್ಲಿ ಕೋಡಿಯಲ್ಲಿ 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ ಬ್ರೇಕ್‌ ವಾಟರ್‌ ಯೋಜನೆ 2015ರಲ್ಲಿ ಮಂಜೂರಾಗಿತ್ತು. ಟೆಟ್ರಾಫೈಡ್‌ ಮೂಲಕ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ಕಾಮಗಾರಿ ಪ್ರಸ್ತುತ ಪೂರ್ಣಗೊಂಡಿದೆ. ಇವೆರಡನ್ನು ಸೀ ವಾಕ್‌ ಆಗಿ ಪರಿವರ್ತಿಸುವ ವಿಚಾರ ಇತ್ತೀಚೆಗೆ ಜಿಲ್ಲಾಧಿಕಾರಿ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವವಾಗಿತ್ತು.

ಯೋಜನೆಯೇನು?
ಮಲ್ಪೆಯಲ್ಲಿ ಈಗಾಗಲೇ ಸೀವಾಕ್‌ ನಿರ್ಮಿಸಲಾಗಿದ್ದು, ಅದೇ ಮಾದರಿಯಲ್ಲಿ ಕೋಡಿ ಹಾಗೂ ಗಂಗೊಳ್ಳಿಯ ಬ್ರೇಕ್‌ ವಾಟರ್‌ಗಳಿಗೆ ಸೈಡ್‌ವಾಲ್‌ ನಿರ್ಮಿಸಿ, ಪ್ರವಾಸಿಗರಿಗೆ ನಡೆದಾಡಲು, ಕಡಲ ತೆರೆಗಳ ಉಬ್ಬರ – ಇಳಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರವಾಸೀ ವಾಹನ ನಿಲುಗಡೆಗೆ ಸಮೀಪದಲ್ಲೇ ವ್ಯವಸ್ಥೆ, ಹೈ ಮಾಸ್ಟ್‌ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ಯೋಜನೆಯಲ್ಲಿ ಸೇರಿವೆ.

ಮಂಗಳೂರಿನ  ಬೆಂಗ್ರೆಯಲ್ಲೂ ಸೀ ವಾಕ್‌
ಮಂಗಳೂರಿನ ಬೆಂಗ್ರೆಯಲ್ಲಿಯೂ ಕಡಲ್ಕೊರೆತ ತಡೆಗೋಡೆಯನ್ನು ಸೀ ವಾಕ್‌ ಆಗಿ ಮಾರ್ಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಒಂದೆಡೆ ಫಲ್ಗುಣಿ ನದಿ, ಮತ್ತೂಂದೆಡೆ ಅರಬಿ ಸಮುದ್ರವಿರುವ ಬೆಂಗ್ರೆಯಲ್ಲಿ ಮಲ್ಪೆ ಮಾದರಿಯಲ್ಲಿ ಸೀವಾಕ್‌ ಅಭಿವೃದ್ಧಿಪಡಿಸುವ ಸಲುವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸದ್ಯವೇ ಪ್ರಸ್ತಾವನೆ ಕಳುಹಿಸಲಾಗುವುದು. ಇಲ್ಲಿಂದ ಮಂಗಳೂರು ನಗರಕ್ಕೆ 15 ಕಿ.ಮೀ. ದೂರವಿದ್ದು, ಇಲ್ಲಿ ಸೀ ವಾಕ್‌ ಆದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಬಹುದು.
ಉದಯ್‌ ಕುಮಾರ್‌ ಶೆಟ್ಟಿ, ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ದ.ಕ. 

ಯೋಜನೆ ರೂಪಿಸಲಾಗುತ್ತಿದೆ
ಮಲ್ಪೆ ಮಾದರಿಯಲ್ಲಿ ಕೋಡಿ ಹಾಗೂ ಗಂಗೊಳ್ಳಿಯಲ್ಲಿಯೂ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಕಾರದಲ್ಲಿ ಸೀ ವಾಕ್‌ ಯೋಜನೆಯನ್ನು ರೂಪಿಸಲಾಗುತ್ತಿದೆ. ಕುಂದಾಪುರದ ಕಡಲ ತೀರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. 
 ಅನಿತಾ, ಬಿ.ಆರ್‌. ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉಡುಪಿ

Advertisement

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next