Advertisement

ಕಡಲ್ಕೊರೆತ: ಗಂಜಿಕೇಂದ್ರ ಸ್ಥಾಪನೆಗೆ ಆದೇಶ

03:15 AM Jun 29, 2017 | Team Udayavani |

ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಈ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಸುಮಾರು 40 ಮನೆಗಳನ್ನು ಗುರುತಿಸಿದ್ದು ಅವರಿಗೆ ತಾತ್ಕಾಲಿಕವಾಗಿ ಗಂಜಿ ಕೇಂದ್ರ ಸ್ಥಾಪನೆಗೆ ಉಳ್ಳಾಲ ನಗರಸಭೆಗೆ ಜಿಲ್ಲಾಡಳಿತ ಆದೇಶಿಸಿದೆ. ಕಳೆದ ನಾಲ್ಕು ದಿನಗಳಿಂದ ಉಳ್ಳಾಲ ಸೇರಿದಂತೆ ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದೆ. ಸಮುದ್ರದ ಅಲೆಗಳು ಮನೆಗಳಿಗಪ್ಪಳಿಸುತ್ತಿದ್ದು, ಮೊಗವೀರಪಟ್ಣ, ಕಿಲಿರಿಯಾ ನಗರ ಮುಕ್ಕಚ್ಚೇರಿ, ಸುಭಾಷ್‌ನಗರ, ಕೈಕೋದಲ್ಲಿ ಮನೆಗಳ ಒಳಗೆ ಸಮುದ್ರದ ನೀರು ತುಂಬಿ ವಾಸಿಸಲು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಅಪಾಯದಲ್ಲಿರುವ ಮನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಗುರುವಾರ ಸಹಾಯಕ ಕಮಿಷನರ್‌ ರೇಣುಕಾ ಪ್ರಸಾದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಕೈಕೋ ಬಳಿ ಸಹಾಯಕ ಕಮಿಷನರ್‌ ಅವರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.

Advertisement

ಗಂಜಿ ಕೇಂದ್ರ ಸ್ಥಾಪಿಸಲು ಆದೇಶ
ಉಳ್ಳಾಲದಲ್ಲಿ ಗಂಜಿ ಕೇಂದ್ರ ಸ್ಥಾಪನೆಗೆ ಸಹಾಯಕ ಕಮಿಷನರ್‌ ಸ್ಥಳಿಯಾಡಳಿತ ಸಂಸ್ಥೆಗೆ ಆದೇಶ ನೀಡಿದ್ದು, ಸ್ಥಳೀಯ ಅಂಗನವಾಡಿ ಕೇಂದ್ರ, ಖಾಲಿ ಇರುವ ಫ್ಲ್ಯಾಟ್‌ಗಳು ಮತ್ತು ಹಾಸ್ಟೆಲ್‌ಗ‌ಳಿಗೆ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ  ಕಾರ್ಯ ನಡೆಯುತ್ತಿದೆ ಎಂದು ಪೌರಾಯುಕ್ತೆ ವಾಣಿ ವಿ. ಆಳ್ವ ತಿಳಿಸಿದರು.

ಮೊಗವೀರಪಟ್ಣದಲ್ಲಿ ಹೆಚ್ಚಿದ ಕಡಲ ಅಬ್ಬರ
ಶಾಶ್ವತ ಕಾಮಗಾರಿಯಿಂದ ಕೈಕೋ ಕಿಲಿರಿಯಾ ನಗರದಲ್ಲಿ ಕಡಲ್ಕೊರೆತ ಹೆಚ್ಚಿದ್ದು, ಇತ್ತ ಮೊಗವೀರಪಟ್ಣದಲ್ಲಿ ಕಳೆದ ಮೂರು ದಿನಗಳಿಂದ ಸಮುದ್ರದ ಬಿರುಸು ಹೆಚ್ಚಿದೆ. ಮುಖ್ಯವಾಗಿ ಕೋಟೆಪುರ ಮತ್ತು ಮೊಗವೀರಪಟ್ಣ ಬೀಚ್‌ ಬಳಿ ಸಮುದ್ರದ ಮಧ್ಯೆ ರೀಫ್‌ ಕಾಮಗಾರಿ ನಡೆದಿದ್ದು ಈ ಎರಡು ರೀಫ್‌ಗಳ ಮಧ್ಯೆ ಸುಮಾರು 400 ಮೀಟರ್‌ ಅಂತರವಿದ್ದು, ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಅಲೆಗಳು ಬರುತ್ತಿದ್ದು, ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ.

ಕಡಲ್ಕೊರೆತ ಪ್ರದೇಶಕ್ಕೆ ಸಹಾಯಕ ಕಮಿಷನರ್‌ ಅವರೊಂದಿಗೆ ತಹ ಶೀಲ್ದಾರ್‌ ಸಿ. ಮಹಾದೇವ, ಕಂದಾಯ ಅಧಿಕಾರಿ ಜೋಸ್ಲಿನ್‌ ಸ್ಟೀಫನ್‌, ಪ್ರಮೋದ್‌ ಕುಮಾರ್‌, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್‌ ಕುಂಞಿಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ ಸಹಾಯಕ ಕಾರ್ಯಪಾಲಕ ಅಭಿಯಂತರ ರಾದ ಉಮೇಶ್‌ ಕಾಮತ್‌, ಕಿರಿಯ ಅಭಿಯಂತರಾದ ದಿವಾಕರ್‌, ಕೌನ್ಸಿಲರ್‌ಗಳಾದ ಮಹಮ್ಮದ್‌ ಮುಕ್ಕಚ್ಚೇರಿ, ಸೂರ್ಯಕಲಾ,ಮೀನಾಕ್ಷಿ ದಾಮೋದರ್‌ ಉಪಸ್ಥಿತರಿದ್ದರು.

ಶಾಶ್ವತ ಕಾಮಗಾರಿಯಿಂದ ಮೊಗವೀರಪಟ್ಣಕ್ಕೆ ಯಾವುದೇ ಲಾಭವಾಗಿಲ್ಲ. ಮೊಗವೀರಪಟ್ಣ ಮತ್ತು ಕೋಟೆಪುರ ಬಳಿ ನಿರ್ಮಿಸಿರುವ ರೀಫ್‌ ಕಾಮಗಾರಿಯ ಮಧ್ಯೆ ಖಾಲಿ ಇರುವ ಪ್ರದೇಶದಲ್ಲಿ ಇನ್ನೊಂದು ರೀಫ್‌ ಕಾಮಗಾರಿ ನಡೆಸಿದರೆ ಸಮಸ್ಯೆ ಪರಿಹಾರ ಸಾಧ್ಯ.
– ಭರತ್‌ ಕುಮಾರ್‌ ಉಳ್ಳಾಲ, ಅಧ್ಯಕ್ಷರು ಉಳ್ಳಾಲ ಮೊಗವೀರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next