Advertisement
ರಾಜ್ಯದ 320 ಕಿ.ಮೀ. ಕರಾವಳಿಯ ಭದ್ರತೆ ಮತ್ತು ಕಾರ್ಯಾಚರಣೆ ಜತೆಗೆ ಸಮುದ್ರದ ಮಧ್ಯೆ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರನ್ನು ರಕ್ಷಿಸುವ ಕೆಲಸವನ್ನು ಕರಾವಳಿ ಕಾವಲು ಪಡೆಗೆ ವಹಿಸಲಾಗಿದೆ. ಇದರ ಕೇಂದ್ರ ಕಚೇರಿ ಇರುವುದು ಮಲ್ಪೆಯಲ್ಲಿ. ಮಲ್ಪೆ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ 85ಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಮೀನುಗಾರರನ್ನು ಕಾವಲು ಪಡೆ ರಕ್ಷಿಸಿದೆ. ಇದಕ್ಕಿಂತ ಹೆಚ್ಚಾಗಿ ಸ್ಥಳೀಯ ಜೀವ ರಕ್ಷಕರು ಕಾಪಾಡಿದ್ದಾರೆ ಎನ್ನಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಸದಾ ಅಪಾಯದಲ್ಲಿಯೇ ಸಮುದ್ರದಲ್ಲಿ ಕಾರ್ಯ ನಿರ್ವಹಿಸುವ ಮೀನುಗಾರರಲ್ಲಿ ಹಲ ವ ರು ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಬೋಟ್ ಮುಳುಗಡೆ ಮತ್ತು ಇತರ ಸಮಸ್ಯೆಗೆ ಸಿಲುಕಿದಾಗ ಮೀನುಗಾರರನ್ನು ಇನ್ನೊಂದು ಬೋಟ್‌ನವರು ರಕ್ಷಿಸಿ ಬಂದರಿಗೆ ಬರುವ ಮುನ್ನ ಹಾಗೂ ಅನಂತರ ಅಲ್ಲಿಂದ ಆಸ್ಪತ್ರೆಗೆ ಸಾಗಿಸಲು ಈ ನಡುವೆ ಸಾಕಷ್ಟು ಸಮಯ ತಗಲುವುದರಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಸುಸ್ಥಿತಿಯಲ್ಲಿಲ್ಲದ ರಕ್ಷಣ ಬೋಟ್
ಮಲ್ಪೆಯ ಎರಡು ಸಹಿತ ಕರಾವಳಿಯಲ್ಲಿರುವ 15 ರಕ್ಷಣ ಬೋಟ್‌ಗಳಲ್ಲಿ ಬಹುತೇಕ ಸುಸ್ಥಿತಿಯಲ್ಲಿಲ್ಲ. ಪ್ರತೀ ವರ್ಷ ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದಾಗಿ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗುವುದು, ಇತರ ಅವಘಡಗಳಿಗೆ ಒಳಗಾಗುವುದು ಸಹಜ. ಕಾವಲು ಪಡೆಯ ಎಲ್ಲ ಠಾಣೆಗಳಿಗೂ ಸುಸಜ್ಜಿತ ರಕ್ಷಣಾ ಬೋಟ್ ಒದಗಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.
Related Articles
ರಕ್ಷಣ ಬೋಟ್‌ಗಳಲ್ಲಿ ಕೆಲವೊಂದು ದುರಸ್ತಿಯಲ್ಲಿವೆ. ಸರಕಾರ ರಕ್ಷಣ ಬೋಟ್‌ಗಳ ಮಿಡ್‌ಲೈಫ್ ಅಪ್‌ಡೇಶನ್‌ಗೆ 20 ಕೋ. ರೂ. ಒದಗಿಸಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದು ಕರಾವಳಿ ಕಾವಲು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ವಿಧಾನಸಭೆಯಲ್ಲೂ ಪ್ರಸ್ತಾವಸೆ. 20ರಂದು ನಡೆದ ವಿಧಾನಸಭೆಯ ಕಲಾಪದಲ್ಲಿ ಶಾಸಕ ಕೆ. ರಘುಪತಿ ಭಟ್‌ಅವರು ಸಮುದ್ರ ಮಧ್ಯೆ ತುರ್ತು ಸೇವೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಗೆ ಸೀ ಆ್ಯಂಬುಲೆನ್ಸ್ ಒದಗಿಸುವ ಬಗ್ಗೆ ವಿಷಯ ಪ್ರಸ್ತಾವಿಸಿದ್ದರು. ಗೃಹ ಇಲಾಖೆಯಿಂದ ಸಕಾರಾತ್ಮಕ ಉತ್ತರವೂ ಸಿಕ್ಕಿದ್ದು, ಆದಷ್ಟು ಶೀಘ್ರದಲ್ಲಿ ದೊರೆಯುವ ಭರವಸೆಯೂ ದೊರೆಕಿತ್ತು. ಆದರೆ ಇನ್ನು ಮಂಜೂರಾತಿ ಸಿಕ್ಕಿಲ್ಲ ಎನ್ನಲಾಗಿದೆ. ಸರಕಾರದ ನಿರ್ಲಕ್ಷ್ಯ
ಸೀ ಆ್ಯಂಬುಲೆನ್ಸ್ ಬೇಕೆಂದು 5 ವರ್ಷದಿಂದ ಬೇಡಿಕೆ ಇಡುತ್ತಾ ಬಂದಿದ್ದೇವೆ. ಸಮುದ್ರದ ಮಧ್ಯೆ ಮೀನುಗಾರರಿಗೆ ಏನಾದರೂ ಅವಘಡಗಳು ಉಂಟಾದರೆ ಆತನನ್ನು ದಡಕ್ಕೆ ತರುವಾಗ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ ಸರಕಾರ ಮಾತ್ರ ಇತ್ತ ಗಮನವಹಿಸಿದಂತೆ ಕಾಣುವುದಿಲ್ಲ.-ಜಯ ಸಿ. ಕೋಟ್ಯಾನ್, ಅಧ್ಯಕ್ಷರು, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿ ವ್ಯವಸ್ಥೆ ಕಲ್ಪಿಸಿ
ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಬಹಳಷ್ಟು ಪ್ರಾಣಹಾನಿಯಾಗಿದೆ. ಸೀ ಆ್ಯಂಬುಲೆನ್ಸ್ ಬೇಕೆಂದು ಮೀನುಗಾರಿಕೆ ಸಚಿವರು, ಶಾಸಕರಲ್ಲಿ ಮನವಿ ಮಾಡಲಾಗಿದೆ. ಮೀನುಗಾರರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ