ವರದಿ: ಜೀಯು, ಹೊನ್ನಾವರ
ಹೊನ್ನಾವರ: ದಕ್ಷಿಣ, ಕೊಂಕಣ ಮತ್ತು ಮಲೆನಾಡನ್ನು 54 ವರ್ಷ ಆಳಿದ್ದ ಚೆನ್ನಬೈರಾದೇವಿ ಇತಿಹಾಸ ಸೃಷ್ಟಿಸಿದ ರಾಣಿ. ಈಕೆಯ ರಾಜಧಾನಿ ಗೇರಸೊಪ್ಪಾದ ಗೌರವಾರ್ಥ ಬ್ರಿಟೀಷ್-ಇಂಡಿಯನ್ ಸ್ಟೀಮ್ ನೇವಿ ಗೇಶನ್ ಕಂಪನಿ ಎಸ್.ಎಸ್. ಗೇರಸೊಪ್ಪಾ ಎಂದೇ ಹಡಗೊಂದಕ್ಕೆ ನಾಮಕರಣ ಮಾಡಿತ್ತು. ಈ ಹಡಗು ಮಧ್ಯ ಸಮುದ್ರದಲ್ಲಿ ಮುಳುಗಿದ್ದು, ಅದರಲ್ಲಿದ್ದ ಬೆಳ್ಳಿಯನ್ನು ಪತ್ತೆಮಾಡಿ ಮೇಲೆತ್ತಿದ ನಂತರ ಗೇರಸೊಪ್ಪಾ ಅದೆಂಥ ವಾಣಿಜ್ಯ ಕೇಂದ್ರವಾಗಿತ್ತು? ರಾಣಿಯ ಆಡಳಿತ ವೈಭವ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.
ರಾಜರ ಆಡಳಿತ, ಕೊನೆಗೆ ಬ್ರಿಟಿಷ್ ಆಡಳಿತವೂ ಕೊನೆಗೊಂಡು ದೇಶ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷದ ನಂತರ ಚೈನ್ನಬೈರಾದೇವಿಯ ಚರಿತ್ರೆ ಹಾಗೂ ಆಕೆಯ ಮೂರ್ತಿ ಸ್ಥಾಪನೆಗೆ ಹಲವರು ಆಸಕ್ತಿ ತೋರುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. ರಾಣಿ ಚನ್ನಬೈರಾದೇವಿಯ ಆಡಳಿತದಲ್ಲಿ ಕಾಳುಮೆಣಸು, ಮಸಾಲೆ ಸಾಮಗ್ರಿ, ರಾಯಲ್ ಪುದೀನಾ, ಕಚ್ಚಾಕಬ್ಬಿಣ, ಚಹಾ ಮತ್ತು ಬೆಳ್ಳಿ ಗೇರಸೊಪ್ಪಾ ಬಂದರಿನಿಂದ ಆಯಾತ, ನಿರ್ಯಾತವಾಗುತ್ತಿತ್ತು. ಚೆನ್ನಬೈರಾದೇವಿ ತನ್ನ ಸಾಮ್ರಾಜ್ಯವನ್ನು ಆರ್ಥಿಕವಾಗಿ ಬಲಪಡಿಸಿದ್ದಲ್ಲದೇ ಬ್ರಿಟೀಷ್, ಪೋರ್ಚುಗೀಸ್ ಮತ್ತು ಉತ್ತರ ಭಾರತದ ರಾಜರೊಂದಿಗೂ ಯುದ್ಧಮಾಡಿ ಗೆದ್ದಿದ್ದರು. ಅವಳಿಂದ ಹತನಾದ ಬ್ರಿಟೀಷ್ ಕರ್ನಲ್ ಒಬ್ಬನ ಸ್ಮಾರಕ ಸ್ತಂಭ ಹೊನ್ನಾವರದಲ್ಲಿದೆ.
ವ್ಯಾಪಾರ ವಹಿವಾಟು ಮುಗಿಸಿಕೊಂಡು 1941ರಲ್ಲಿ ಇಂಗ್ಲೆಂಡ್ ಪ್ರಯಾಣದಲ್ಲಿದ್ದಾಗ ಎಸ್.ಎಸ್. ಗೇರುಸೊಪ್ಪಾ ಜರ್ಮನ್ ಸೈನ್ಯದ ಗುಂಡಿಗೆ ಗುರಿಯಾಗಿ 85ನಾವಿಕರೊಂದಿಗೆ ಜಲಸಮಾಧಿಯಾಯಿತು. ಇತಿಹಾಸ ಆಗಿದ್ದ ಈ ಘಟನೆ ಅದರಲ್ಲಿದ್ದ 150 ಮಿಲಿಯನ್ ಡಾಲರ್ ಮೌಲ್ಯದ 48ಟನ್ ಬೆಳ್ಳಿಯ ಗಟ್ಟಿಯನ್ನು ಒಡಿಶಾ ಮರೈನ್ ಎಕ್ಸ್‌ಪ್ಲೊರೇಶನ್ ಕಂಪನಿಯ ಸಿಬ್ಬಂದಿ 2011ರಲ್ಲಿ ಮೇಲೆತ್ತಿದಾಗ ಇತಿಹಾಸಕ್ಕೆ ಜೀವ ಬಂತು.
ಎರಡು ತಿಂಗಳ ಸತತ ಶೋಧದೊಂದಿಗೆ 2.9 ಮೈಲು ಆಳದಿಂದ ಬೆಳ್ಳಿ ಗಟ್ಟಿಯನ್ನು ಮೇಲೆತ್ತಲಾಗಿದೆ. 5,237 ಟನ್ ಸಾಮರ್ಥ್ಯದ 399 ಫೂಟ್ ಉದ್ದದ ಎಸ್.ಎಸ್. ಗೇರುಸೊಪ್ಪಾ ಹಡಗು ಗಂಟೆಗೆ 19.4 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. 28ಫೂಟ್ ಎತ್ತರವಿತ್ತು, 52ಫೂಟ್ ಉದ್ದದ ಕಂಬ ಹೊಂದಿರುವ ಉಗಿಹಡಗಿನ ಇತಿಹಾಸದ ಬೆನ್ನುಹತ್ತಿದರೆ ಚೆನ್ನಬೈರಾದೇವಿ ಸಾಮ್ರಾಜ್ಯದ ಕುರಿತು ಇನ್ನಷ್ಟು ವಿವರ ದೊರಕಬಹುದಾಗಿದೆ.