Advertisement

ಆರು ಪಥದ ಕಾರಿಡಾರ್‌ಗೆ ಕತ್ತರಿ

11:40 AM Nov 24, 2018 | Team Udayavani |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ “ಎಲಿವೇಟೆಡ್‌ ಕಾರಿಡಾರ್‌’ ಯೋಜನೆಗೆ ಕತ್ತರಿ ಹಾಕಲು ಚಿಂತನೆ ನಡೆದಿದೆ. ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ರೂಪಿಸಿರುವ, ನಗರದ ನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ ಎರಡು ಆರು ಪಥ ಸೇರಿದಂತೆ ಆರು ಎಲಿವೇಟೆಡ್‌ ಕಾರಿಡಾರ್‌ಗಳು ಪ್ರಮುಖ ಭಾಗಗಳಲ್ಲಿ ಹಾದುಹೋಗಲಿದ್ದು, ಇದಕ್ಕಾಗಿ ಸುಮಾರು 56.89 ಹೆಕ್ಟೇರ್‌ ಭೂಸ್ವಾಧೀನದ ಅವಶ್ಯಕತೆ ಇದೆ.

Advertisement

ಇದರ ಪರಿಹಾರ ಮೊತ್ತ ಹೆಚ್ಚು ಕಡಿಮೆ ಇಡೀ ಯೋಜನೆಗೆ ತಗಲುವ ವೆಚ್ಚಕ್ಕೆ ಸರಿಸಮವಾಗಿದೆ. ಈ ಹಿನ್ನೆಲೆಯಲ್ಲಿ ಆರು ಪಥವನ್ನು ನಾಲ್ಕು ಪಥಕ್ಕೆ ಇಳಿಸಲು ಸಾಧ್ಯಾಸಾಧ್ಯತೆಗಳ ಬಗ್ಗೆ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ. ಯೋಜನಾ ವೆಚ್ಚ 15,825 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೆಚ್ಚು ಬೇಡಿಕೆ ಇರುವ ಭೂಮಿಯನ್ನು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಬೇಕಾಗುವುದರಿಂದ ಪರಿಹಾರ ಮೊತ್ತ 13 ಸಾವಿರ ಕೋಟಿ ರೂ. ಆಗಲಿದೆ.

ಆದ್ದರಿಂದ ಸಾಧ್ಯವಾದಷ್ಟು ಭೂಸ್ವಾಧೀನ ಪ್ರಮಾಣ ಕಡಿಮೆ ಮಾಡಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಪರ್ಯಾಯ ಹುಡುಕಾಟ ನಡೆಸಿದೆ. ಆ ಹುಡುಕಾಟದಲ್ಲಿ ಆರು ಪಥವನ್ನು ನಾಲ್ಕು ಪಥಕ್ಕೆ ಇಳಿಸುವುದೂ ಒಂದಾಗಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನೊಂದು ವಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ನಿಗಮದ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. 

ಎರಡು ಷಟ³ಥಗಳು ಮತ್ತು ಅವುಗಳನ್ನು ಸಂಪರ್ಕಿಸುವ ನಾಲ್ಕು ಚತುಷ್ಪಥಗಳು ಸೇರಿ ಒಟ್ಟಾರೆ 102.04 ಕಿ.ಮೀ. ಉದ್ದದ ಆರು ರಸ್ತೆಗಳ ನಿರ್ಮಾಣಕ್ಕೆ ಸರ್ಕಾರ ಉದ್ದೇಶಿಸಿದ್ದು, ಈ ಪೈಕಿ ಷಟ³ಥಗಳ ಉದ್ದವೇ 58.835 ಕಿ.ಮೀ. ಆಗುತ್ತದೆ. ಇದರ ವಿನ್ಯಾಸ ಅಥವಾ ಮಾರ್ಗಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕೊಂಚ ಬದಲಾವಣೆ ಮಾಡುವುದು ಸೇರಿದಂತೆ ಮೂರ್‍ನಾಲ್ಕು ಪರ್ಯಾಯಗಳು ಕೆಆರ್‌ಡಿಸಿಎಲ್‌ ಮುಂದಿವೆ. ಆದರೆ, ಆರು ಪಥವನ್ನು ನಾಲ್ಕು ಪಥಕ್ಕೆ ಇಳಿಸಿದರೆ ಯೋಜನೆಗೆ ಬೇಕಾಗುವ ಭೂಮಿ ಅಗತ್ಯತೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಮರಗಳ ಹನನ ಕೂಡ ತಗ್ಗಲಿದೆ. 

ವಿಳಂಬ; ವೆಚ್ಚದ ಮೇಲೆ ಪರಿಣಾಮ: ಅಲ್ಲದೆ, “ನಮ್ಮ ಮೆಟ್ರೋ’ ಸೇರಿದಂತೆ ಬಹುತೇಕ ಹಿಂದಿನ ಎಲ್ಲ ಯೋಜನೆಗಳಿಗೆ ತೊಡಕಾಗಿದ್ದುದು ಭೂಸ್ವಾಧೀನ ಪ್ರಕ್ರಿಯೆ. ಹೆಚ್ಚು ಭೂಸ್ವಾಧೀನಕ್ಕೆ ಮುಂದಾದರೆ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತದೆ. ಮಾರ್ಗದಲ್ಲಿ ಯಾವುದಾದರೂ ವ್ಯಾಜ್ಯದಲ್ಲಿರುವ ಭೂಮಿ ಇದ್ದರಂತೂ ಮತ್ತೂಂದು ತಲೆನೋವು ಆಗಲಿದೆ.

Advertisement

ಇದು ಯೋಜನಾ ವೆಚ್ಚದ ಮೇಲೂ ಪರಿಣಾಮ ಬೀರುತ್ತದೆ. ಈ ಎಲ್ಲ ಅಂಶಗಳನ್ನು ಅಳೆದು-ತೂಗಿ ಎರಡು-ಮೂರು ಆಯ್ಕೆಗಳನ್ನು ಕೆಆರ್‌ಡಿಸಿಎಲ್‌ ಸರ್ಕಾರದ ಮುಂದಿಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಷಟ³ಥ ನಿರ್ಮಾಣವಾದರೆ, ಆಗ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸಲಿವೆ ಎಂದು ಅಂದಾಜಿಸಲಾಗಿದೆ.

ಯೋಜನೆಯಲ್ಲಿ ಎರಡು ಪಥಗಳು ಕಡಿಮೆಯಾದರೆ ಆ ವಾಹನಗಳ ಸಂಚಾರ ಸಾಮರ್ಥ್ಯ ಕೂಡ ತಗ್ಗಲಿದೆ. ಜತೆಗೆ ಭವಿಷ್ಯದಲ್ಲಿ ಹೆಚ್ಚಲಿರುವ ವಾಹನಗಳ ಸಾಂದ್ರತೆಗೆ ಪೂರಕವಾಗಿ ಆಗುತ್ತದೆಯೇ ಎಂಬ ಅನುಮಾನ. ಆಗ ಇದರ ಉದ್ದೇಶ ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳದಿರಬಹುದು. ಈ ಅಂಶಗಳ ಸಾಧಕ-ಬಾಧಕಗಳ ಬಗ್ಗೆಯೂ ತಜ್ಞರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌ ಎಲ್ಲೆಲ್ಲಿ? 
ಮಾರ್ಗ    ಉದ್ದ 

-ಹೆಬ್ಟಾಳ- ಸಿಲ್ಕ್ಬೋರ್ಡ್‌ ಜಂಕ್ಷನ್‌    26.89 ಕಿ.ಮೀ. (ಆರು ಪಥ) 
-ಕೆ.ಆರ್‌. ಪುರ- ಗೊರಗುಂಟೆಪಾಳ್ಯ    31.94 ಕಿ.ಮೀ. (ಆರು ಪಥ) 
-ವರ್ತೂರು ಕೋಡಿ- ಜ್ಞಾನಭಾರತಿ    29.48 ಕಿ.ಮೀ. (ಆರು ಪಥ) 
-ಜಾನ್ಸ್‌ ಆಸ್ಪತ್ರೆ- ಅಗರ    4.48 ಕಿ.ಮೀ. (ಚತುಷ್ಪಥ) 
-ಹಲಸೂರು- ಡಿಸೋಜ ವೃತ್ತ    2.80 ಕಿ.ಮೀ. (ಚತುಷ್ಪಥ) 
-ವ್ಹೀಲರ್ ರಸ್ತೆ- ಕಲ್ಯಾಣನಗರ    6.46 (ಚತುಷ್ಪಥ) 
-ಒಟ್ಟಾರೆ    102.04 ಕಿ.ಮೀ.  ಯೋಜನಾ ವೆಚ್ಚ- 15,825 ಕೋಟಿ ರೂ.  

ಏನಿದು ಯೋಜನೆ?: ನಗರದಲ್ಲಿ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸಲು ಒಂದಕ್ಕೊಂದು ಸಂಪರ್ಕ ಹೊಂದಿರುವ ಆರು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹೈಬ್ರಿಡ್‌ ಅನ್ಯೂಟಿ ಪ್ರಕಾರ 15,825 ಕೋಟಿ ರೂ. ವೆಚ್ಚ (ಭೂಸ್ವಾಧೀನ ವೆಚ್ಚ ಪ್ರತ್ಯೇಕ)ದಲ್ಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಳೆದ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಒದಗಿಸಲಾಗಿದೆ.

-ಕಾರಿಡಾರ್‌ನಲ್ಲಿ ವೇಗಮಿತಿ  ಗಂಟೆಗೆ 50-80 ಕಿ.ಮೀ.
-ಎಲಿವೇಟೆಡ್‌ ರಸ್ತೆಯ ಅಗಲ- 3.5 ಮೀ.
-ಎತ್ತರ- 11 ಮೀ.

ಯಾವುದೇ ಒಂದು ಯೋಜನೆಗೆ ಭೂಸ್ವಾಧೀನ ಮತ್ತು ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಪ್ರಯತ್ನ ಇದ್ದೇ ಇರುತ್ತದೆ. ಎಲಿವೇಟೆಡ್‌ ಕಾರಿಡಾರ್‌ನಲ್ಲೂ ಈ ಪರ್ಯಾಯ ಆಯ್ಕೆಗಳ ಹುಡುಕಾಟ ನಡೆದಿದೆ. ಅದರಲ್ಲಿ ಆರು ಪಥವನ್ನು ನಾಲ್ಕು ಪಥ ಮಾಡುವುದೂ ಇರಬಹುದು. ಆದರೆ, ಈ ಯೋಜನೆಯಂತೂ ಅನುಷ್ಠಾನ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.
-ಎಂ. ಗಣೇಶ್‌, ವ್ಯವಸ್ಥಾಪಕ ನಿರ್ದೇಶಕರು, ಕೆಆರ್‌ಡಿಸಿಎಲ್‌.

* ವಿಜಯಕುಮಾರ್ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next