Advertisement

ಶಿಕ್ಷಣ ವ್ಯವಸ್ಥೆಯಲ್ಲಿ ಸ್ಕೌಟ್ಸ್‌- ಗೈಡ್ಸ್‌ ಕಡ್ಡಾಯಗೊಳಿಸಿ

12:26 PM Oct 10, 2018 | |

ಬೆಂಗಳೂರು: “ಉತ್ತಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಅಥವಾ ಎನ್‌ಸಿಸಿಯಂತಹ ಸೇವಾ ಕೋರ್ಸ್‌ಗಳನ್ನು ಕಡ್ಡಾಯಗೊಳಿಸಬೇಕು’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

Advertisement

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ವಿ.ಪಿ.ದೀನದಯಾಳು ನಾಯ್ಡು ಜನ್ಮಶತಮಾನೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಮೌಲ್ಯಗಳು ಕುಸಿಯುತ್ತಿವೆ.

ಸಾಮಾಜಿಕ ವರ್ತನೆಗಳು ಬದಲಾಗುತ್ತಿದ್ದು, ಒಂದು ರೀತಿಯ ದುರದೃಷ್ಟಕರ ಸ್ಥಿತಿ ತಲುಪಿದ್ದೇವೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಅದರಲ್ಲೂ ಯುವಜನಾಂಗದಲ್ಲಿ ಶಿಸ್ತು, ಭಾವೈಕ್ಯತೆ ಮನೋಭಾವ ಬೆಳೆಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಅಥವಾ ಎನ್‌ಸಿಸಿ ಅಥವಾ ಎನ್‌ಎಸ್‌ಎಸ್‌ನಂತಹ ಸೇವೆಗಳನ್ನು ಪೂರೈಸುವುದು ಕಡ್ಡಾಯಗೊಳಿಸಬೇಕು ಎಂದರು.

ನೈತಿಕತೆ ಹೋಗಿದೆ; ವಿಜ್ಞಾನ ಉಳಿದಿದೆ: ಈ ಹಿಂದೆ ನಾವು ಕಲಿಯುವಾಗ “ನೈತಿಕ ವಿಜ್ಞಾನ’ ವಿಷಯ ಇತ್ತು. ಈಗ ಅದರಲ್ಲಿ ನೈತಿಕತೆ ಕಳೆದುಹೋಗಿದ್ದು, ಕೇವಲ ವಿಜ್ಞಾನ ಉಳಿದುಕೊಂಡಿದೆ. ಈ ಮೊದಲು ಜೀವನದಲ್ಲಿ “4ಸಿ’ (ಕ್ಯಾರಕ್ಟರ್‌, ಕ್ಯಾಲಿಬರ್‌, ಕೆಪ್ಯಾಸಿಟಿ, ಕಂಡಕ್ಟ್) ಬಹುಮುಖ್ಯ ಪಾತ್ರ ವಹಿಸುತ್ತಿದ್ದವು.

ಆದರೆ, ಈಗ ಆ ಜಾಗವನ್ನು ಕ್ಯಾಶ್‌, ಕಾಸ್ಟ್‌, ಕಮ್ಯುನಿಟಿ, ಕ್ರಿಮಿನಾಲಜಿ ಎಂಬ “4ಸಿ’ಗಳು ಆವರಿಸಿಕೊಂಡಿವೆ. ಇದನ್ನು ಹೋಗಲಾಡಿಸಿ,  ಸಮಾಜದ ಸ್ವಾಸ್ಥ್ಯ ಕಾಪಾಡುವ ಮೂಲಬೇರುಗಳನ್ನು ಮರುಸ್ಥಾಪಿಸಬೇಕಿದೆ. ಇಂದು ಸಮಾಜಕ್ಕೆ ದೀನದಯಾಳು ನಾಯ್ಡು, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಎಸ್‌. ನಿಜಲಿಂಗಪ್ಪ ಅವರಂತಹ ನಾಯಕರ ಅವಶ್ಯಕತೆಯಿದೆ ಎಂದು ಹೇಳಿದರು.  

Advertisement

ರಾಜ್ಯಪಾಲ ವಜೂಭಾಯಿ ವಾಲಾ ಮಾತನಾಡಿ, “ಸಮಾಜದಲ್ಲಿ ನಮ್ಮ ಹುದ್ದೆ, ಕಾರ್ಯವೈಖರಿ ಬೇರೆ ಬೇರೆ ಆಗಿರಬಹುದು. ಆದರೆ, ನಾವೆಲ್ಲರೂ ಒಂದೇ ಹಾಗೂ ನಮ್ಮೆಲ್ಲರ ಗುರಿ ಒಂದೇ ಆಗಿದೆ. ಅದು ಈ ರಾಷ್ಟ್ರದ ರಕ್ಷಣೆ. ಮಹಾತ್ಮ ಗಾಂಧೀಜಿ ಮತ್ತು ದೀನದಯಾಳು ನಾಯ್ಡು ಈ ದೇಶದ ಸ್ವಾತಂತ್ರ್ಯ ಸೇನಾನಿಗಳು. ಇವರು ನಮಗೆ ಆದರ್ಶ ಆಗಬೇಕು’ ಎಂದು ತಿಳಿಸಿದರು.

ಸಚಿವರಾದ ಕೃಷ್ಣ ಬೈರೇಗೌಡ, ಬಂಡೆಪ್ಪ ಕಾಶೆಂಪುರ, ಎನ್‌. ಮಹೇಶ್‌, ಸಂಸದ ಪಿ.ಸಿ. ಮೋಹನ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ.ಕೆ.ಕೆ. ಖಂಡೇಲ್‌ವಾಲ್‌, ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯ ಇತರರು ಇದ್ದರು.

ಒತ್ತುವರಿ ಬಗ್ಗೆ ಬೇಸರ: ಬೆಂಗಳೂರಿನಲ್ಲಿ ಆಗುತ್ತಿರುವ ಬೇಕಾಬಿಟ್ಟಿ ಒತ್ತುವರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ನಗರದ ಬುದ್ಧಿಜೀವಿಗಳು ಮತ್ತು ಸಾಮಾಜಿಕ ಹೋರಾಟಗಾರರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ರಸ್ತೆ, ಸಾರ್ವಜನಿಕ ಸ್ವತ್ತು, ಕೆರೆ-ಕುಂಟೆ, ನದಿಗಳು ಕೂಡ ಒತ್ತುವರಿ ಆಗಿವೆ. ಈ ಮಾನವ ನಿರ್ಮಿತ ವಿಕೋಪಗಳಿಂದ ಹಲವು ಅನಾಹುತಗಳು ಸಂಭವಿಸುತ್ತಿವೆ. ಕೇರಳ, ಕೊಡಗು ಮತ್ತಿತರ ಕಡೆ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಗಳು ಹವಾಮಾನ ವೈಪರಿತ್ಯಕ್ಕೆ ಸಾಕ್ಷಿಯಾಗಿವೆ. ಈ ಕುರಿತು ಬುದ್ಧಿಜೀವಿಗಳು, ಸಾಮಾಜಿಕ ಹೋರಾಟಗಾರರು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

ಜಾದೂ ಮಾಡುವ ಅಲ್ಲಾವುದ್ದೀನ್‌ ಅಲ್ಲ: ಆಗಸದಲ್ಲಿ ಕುಳಿತು ಸ್ಮಾರ್ಟ್‌ ಸಿಟಿ ಆಗಲೆಂದು ಜಾದೂ ಮಾಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅಲ್ಲಾವುದ್ದೀನ್‌ ಅಲ್ಲ ಎಂದು ತೀಕ್ಷ್ಣವಾಗಿ ಉಪ ರಾಷ್ಟ್ರಪತಿ ತಿಳಿಸಿದರು. ನಗರವನ್ನು ಹಾಳುಮಾಡಿದವರು ನಾವೇ. ಈಗ ಸ್ಮಾರ್ಟ್‌ ಸಿಟಿ ಆಗಬೇಕು ಎಂದರೆ ಹೇಗೆ ಸಾಧ್ಯ? ಅದು ಆಗಸದಲ್ಲಿ ಕುಳಿತು ಅಲ್ಲಾವುದ್ದೀನ್‌ನಂತೆ ಹೂಜಿ ಉಜ್ಜಿ ಜಾದು ಮಾಡಿದಷ್ಟು ಸುಲಭವಲ್ಲ. ಇದಕ್ಕೆ ನಾಗರಿಕರ ಸಹಭಾಗಿತ್ವವೂ ಇರಬೇಕಾಗುತ್ತದೆ. ಈ ಕನಸಿಗೆ ಎಲ್ಲರೂ ಕೈಜೋಡಿಸಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next