Advertisement

ಅಮ್ಮನ ಸಂಕಲ್ಪಕ್ಕೆ ಆಧುನಿಕ ಶ್ರವಣನ ಸ್ಕೂಟರ್ ಪಯಣ!

10:03 AM Jan 17, 2019 | |

ಸಾಗರ: 125 ಕಿಮೀ ದೂರದ ಬೇಲೂರು- ಹಳೇಬೀಡನ್ನೇ ತನ್ನ 67 ವರ್ಷಗಳಲ್ಲಿ ನೋಡಿಲ್ಲ ಎಂದು ಅಮ್ಮ ಹೇಳಿದಾಗ ಮಗ ಸಂಕಲ್ಪ ತೆಗೆದುಕೊಂಡು 70 ವರ್ಷದ ತಾಯಿಯನ್ನು ತನ್ನ ಅಪ್ಪನ ಕಾಲದ 20 ವರ್ಷದ ಹಳೆಯ ಚೇತಕ್‌ ಸ್ಕೂಟರ್‌ನಲ್ಲಿ ದಕ್ಷಿಣ ಭಾರತದ ಮಠ- ಮಂದಿರ ಸೇರಿದಂತೆ ಪ್ರೇಕ್ಷಣೀಯ ಸ್ಥಳ ದರ್ಶನಕ್ಕೆ ಹೊರಟಿರುವ ಆಧುನಿಕ ಶ್ರವಣಕುಮಾರ ಬುಧವಾರ ಸಾಗರ ತಾಲೂಕಿನ ವರದಪುರದಲ್ಲಿ ಕಾಣಿಸಿಕೊಂಡರು.

Advertisement

ಮಾತೃ ಸೇವಾ ಸಂಕಲ್ಪ ಯಾತ್ರೆ: ಮೂಲತಃ ಮೈಸೂರಿನವರಾದ ಡಿ. ಕೃಷ್ಣಕುಮಾರ್‌ ಬೆಂಗಳೂರಿನಲ್ಲಿ 13 ವರ್ಷಗಳ ಕಾಲ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್‌ ತಂಡವನ್ನು ಮುನ್ನಡೆಸಿದವರು. ನಾಲ್ಕು ವರ್ಷಗಳ ಹಿಂದೆ ತಂದೆ ವೃದ್ಧಾಪ್ಯದಿಂದ ತೀರಿಕೊಂಡ ಸಂದರ್ಭದಲ್ಲಿ ತಾಯಿ ಚೂಡಾರತ್ನ ಅವರನ್ನು ನೋಡಿದ ಸ್ಥಳಗಳ ಕುರಿತಾಗಿ ಪ್ರಶ್ನಿಸಿದಾಗ ಸಿಕ್ಕ ಉತ್ತರ ಅವರನ್ನು ದಂಗುಪಡಿಸುತ್ತದೆ. ಚೂಡಾರತ್ನ ಅವರಿಗೆ ಒಬ್ಬನೇ ಮಗ. ವಿವಿಧ ಸಂಬಂಧಿಕರು ಹಾಗೂ ಓದು ಮಕ್ಕಳು ಸೇರಿದಂತೆ 10 ಜನ ಖಾಯಂ ಇದ್ದ ಸಂಸಾರವಾಗಿ ಎರಡು ಘಂಟೆ ಪಯಣದ ದೂರದ ಬೇಲೂರು- ಹಳೇಬೀಡನ್ನೇ ಚೂಡಾರತ್ನ ನೋಡಿರಲಿಲ್ಲ. ಈ ಸಂದರ್ಭದಲ್ಲಿ ಮಗ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ ುನ್ನು ಕೈಗೊಳ್ಳಲು ತೀರ್ಮಾನಿಸಿ 2017ರ ಏಪ್ರಿಲ್‌ನಲ್ಲಿ ಉತ್ತರ ಭಾರತದತ್ತ ತೆರಳಲು ತಾಯಿಯನ್ನು ಕಾರಿನಲ್ಲಿ ಹತ್ತಿಸಿಕೊಳ್ಳುತ್ತಾರೆ. ಯಾವುದೇ ಅನುಕರಣೆ ಇಲ್ಲದಿದ್ದರೂ ಆಧುನಿಕ ಶ್ರವಣಕುಮಾರನ ಜನನವಾಗುತ್ತದೆ!

ಉತ್ತರ ಭಾರತದ ಯಾತ್ರೆಯಲ್ಲಿ ಕಾಶ್ಮೀರ, ದೆಹಲಿ, ವೈಷ್ಣೋದೇವಿ, ಗುಲ್‌ಮಾರ್ಗ್‌, ಶಂಕರಾಚಾರ್ಯ ಹಿಲ್‌, ಧಾಲ್‌ ಲೇಕ್‌, ಸೊನಾಮಾರ್ಗ ಮೊದಲಾದ ಸ್ಥಳಗಳನ್ನು 2017ರಲ್ಲಿ ಅಮ್ಮ- ಮಗ ದರ್ಶಿಸಿದರು. ಸುಮಾರು 40 ದಿನಗಳ ಪ್ರವಾಸ ನಡೆಸಿದ್ದರು. ಆದರೆ ಸಂಕಲ್ಪ ಪೂರ್ಣಗೊಂಡಿರಲಿಲ್ಲ. ಈ ವರ್ಷದ ಜನವರಿಗೆ ಅನ್ವಯಿಸುವಂತೆ ವೃತ್ತಿಯಿಂದ ಇಚ್ಛಾ ನಿವೃತ್ತಿ ಪಡೆದ ಕೃಷ್ಣಕುಮಾರ್‌ ಈ ಬಾರಿ ಅಪ್ಪನ ನೆನಪನ್ನು ಹೊತ್ತಿರುವ ಚೇತಕ್‌ ಸ್ಕೂಟರ್‌ ಬಳಸಿ ಸವಾರಿ ಹೊರಟರು. ಕಳೆದ ವರ್ಷದ ಜ. 16ರಂದು ದಕ್ಷಿಣ ಭಾರತ ಪ್ರವಾಸ ಆರಂಭಿಸಿದ್ದು, ಈಗಲೂ ಮನೆಗೆ ಮರಳಿಲ್ಲ. ಈಗಾಗಲೇ ಕೇರಳ, ತಮಿಳುನಾಡು, ತೆಲಂಗಾಣ, ಗೋವಾ, ಆಂಧ್ರಪ್ರದೇಶದ 29,425 ಕಿಮೀ ಸುತ್ತಿ ಶೃಂಗೇರಿ, ಮಂಗಳೂರು ಮೊದಲಾದ ಪ್ರದೇಶಗಳ ಐತಿಹಾಸಿಕ, ಧಾರ್ಮಿಕ, ಮಹತ್ವದ ಸ್ಥಳಗಳನ್ನು ಸಂದರ್ಶಿಸಿ ಸಾಗರ ತಾಲೂಕಿನ ವರದಹಳ್ಳಿಗೆ ಬಂದಿದ್ದಾರೆ.

ಈ ಕುರಿತು ‘ಉದಯವಾಣಿ’ ಜೊತೆ ಮಾತನಾಡಿದ ಕೃಷ್ಣಕುಮಾರ್‌, ಈ ಪ್ರವಾಸ ಆತ್ಮತೃಪ್ತಿಯ ಉದ್ದೇಶದ್ದು, ಸಾಧನೆಯ ಗುರಿಯದ್ದಲ್ಲ. ಯಾರಿಂದಲೂ ನಾವು ಆರ್ಥಿಕ ಬೆಂಬಲ ಕೇಳಿಲ್ಲ. ಸರಳ ಜೀವನಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸಿ ಈ ದಾರಿಗೆ ಬಂದಿದ್ದೇವೆ. ತಾಯಿ ಆರಾಮವಾಗೇ ಇರುವ ಕಾಲದಲ್ಲಿ ಅವರನ್ನು ಸುತ್ತಿಸಿ ಅವರನ್ನು ತೃಪ್ತಿಪಡಿಸಲು ನಿರ್ಧರಿಸಿರುವೆ. ಆದರೆ ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡಿಲ್ಲ. ಗುರುವಾರ ಬೆಳಗ್ಗೆ ವರದಪುರದಿಂದ ತೆರಳಬೇಕು. ಅಮ್ಮ ಆಶಿಸಿದರೆ ಇನ್ನೊಂದು ದಿನ ಇರಲೂ ಸೈ. ನಾವು ಧಾವಂತದ ಬದುಕಿಗೆ ಗುಡ್‌ಬೈ ಹೇಳಿದ್ದೇವೆ ಎಂದರು.

ಪ್ರಪಂಚ ಕೆಟ್ಟಿಲ್ಲ…
ನಿಜವಾಗಿಯೂ ಈ ಲೋಕ ಕೆಟ್ಟಿಲ್ಲ. ಪ್ರಪಂಚದಲ್ಲಿ ಶೇ. 95ರಷ್ಟು ಒಳ್ಳೆಯ ಜನರೇ ಇದ್ದಾರೆ. ಆ ಕಾರಣದಿಂದಾಗಿಯೇ ನಾವು ಈ ಪ್ರವಾಸದಲ್ಲಿ ಒಂದು ದಿನ ಅರೆಹೊಟ್ಟೆಯಲ್ಲಿ ಮಲಗಿಲ್ಲ. ಸುಸಂಸ್ಕೃತರು ಲಭಿಸುತ್ತಿರುವುದರಿಂದಲೇ ಈವರೆಗೆ ಒಂದೂ ಹೊತ್ತು ಹೊಟೇಲ್‌ ಆಹಾರ ಪಡೆಯುವಂತಾಗಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next