ಪಣಜಿ: ಶ್ರವಣಕುಮಾರ ತನ್ನ ತಂದೆ ತಾಯಿಯನ್ನು ತೀರ್ಥಯಾತ್ರೆಗೆ ತಕ್ಕಡಿಯಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಜಗತ್ತಿಗೇ ಮಾದರಿಯಾಗುತ್ತಾನೆ. ಇಂದಹದ್ದೇ ರೀತಿಯಲ್ಲಿ ಮೈಸೂರಿನ ಕೃಷ್ಣಕುಮಾರ್ ರವರು ಬಜಾಜ್ ಚೇತಕ್ ಸ್ಕೂಟರ್ ನಲ್ಲಿ ತನ್ನ ವಯೋವೃದ್ಧ ತಾಯಿ ಚೂಡಾಲಮ್ಮ (73) ರವರನ್ನು ಕರೆದುಕೊಂಡು ಭಾರತದ ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿರುವುದು ಮಾತ್ರವಲ್ಲದೆಯೇ 4 ದೇಶಗಳನ್ನು ಕೂಡ ತೋರಿಸಿಕೊಂಡು ಬಂದಿದ್ದಾರೆ. ಇದೀಗ ಬೆಳಗಾವಿ ಮೂಲಕ ಗೋವಾಕ್ಕೆ ಅವರು ಆಗಮಿಸಿದ್ದಾರೆ.
ಭೂತಾನ್, ಮೈನ್ಮಾರ್, ನೇಪಾಳ, ಮಾತ್ರವಲ್ಲದೆಯೇ ಭಾರತದ ಕನ್ನಾಕುಮಾರಿಯಿಂದ ಹಿಡಿದು ಕಾಶ್ಮೀರದ ವರೆಗೂ ಇದೇ ಬಜಾಜ್ ಚೇತಕ್ ಹಳೇಯ ಸ್ಕೂಟರ್ ನಲ್ಲಿ ಕೃಷ್ಣಕುಮಾರ್ ರವರು ತಮ್ಮ ವಯೋವೃದ್ಧ ತಾಯಿಯನ್ನು ಕೂರಿಸಿಕೊಂಡು ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿಯೇ ಉಳಿದುಕೊಂಡ ಕೃಷ್ಣಕುಮಾರ್ ರವರು ತಮ್ಮ ತಾಯಿಗೆ ದೇಶವನ್ನು ಸುತ್ತಿಸುವ ಸಂಕಲ್ಪ ಮಾಡಿದ್ದರು.
ಬಜಾಜ್ ಚೇತಕ್ ಸ್ಕೂಟರ್ ಅನ್ನು ಕೃಷ್ಣಕುಮಾರ್ ರವರಿಗೆ ಅವರ ತಂದೆಯವರು ಕೊಡಿಸಿದ್ದರು. ಈ ಬೈಕನ್ನು ಅವರು ತಮ್ಮ ತಂದೆ ಎಂದು ಭಾವಿಸಿಕೊಂಡು ಇದೇ ಸ್ಕೂಟರ್ ನಲ್ಲಿ ತಾಯಿಯನ್ನು ತೀರ್ಥ ಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಕೆಎ-09, ಎಕ್ಸ್ -6143 ಈ ನಂಬರಿನ ಬಜಾಜ್ ಚೇತಕ್ ಸ್ಕೂಟರ್ ನಲ್ಲಿಯೇ ಅವರು ತಾಯಿಯನ್ನು ಕರೆದುಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಕೃಷ್ಣಕುಮಾರ್, ‘ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಾವು ಮೊದಲು ನಮ್ಮ ಮನೆಯಲ್ಲಿ 10 ಜನ ಇದ್ದೆವು. ನಮ್ಮ ತಾಯಿ ಇಷ್ಟು ವರ್ಷಗಳ ವರೆಗೆ ಮನೆ ವಾರ್ತೆ ಅಂದರೆ 10 ಜನರನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರು ಮನೆಯಿಂದ ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. 2015 ರಲ್ಲಿ ನಮ್ಮ ತಂದೆಯವರು ವಿಧಿವಷರಾದರು. ನಂತರ ಕಾರ್ಪೊರೇಟ್ ಟೀಂ ಲೀಡರ್ ನೌಕರಿಗೆ ರಾಜೀನಾಮೆ ನೀಡಿ 16 ಜನವರಿ 2018 ರಿಂದ ಮೈಸೂರಿನಿಂದ ನಾನು ಯಾತ್ರೆ ಆರಂಭಿಸಿದೆ. ಇದುವರೆಗೂ 78,162 ಕಿಲೋಮೀಟರ್ ಸುತ್ತಿ ನನ್ನ ಬಜಾಜ್ ಚೇತಕ್ ಸ್ಕೂಟರ್ ನಲ್ಲಿಯೇ ತಾಯಿಯನ್ನು ಕರೆದುಕೊಂಡು ಇಡೀ ಭಾರತ ದರ್ಶನ ಮಾಡಿಸಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸೌರಾಷ್ಟ್ರದಿಂದ ಪರಶುರಾಮ ಕುಂಡದವರೆಗೆ ಹಾಗೂ ಮೂರು ದೇಶಗಳನ್ನು ಕೂಡ ಇದೇ ಸ್ಕೂಟರ್ ನಲ್ಲಿ ಸುತ್ತಿ ಬಂದಿದ್ದೇವೆ. ಇದೀಗ ಗೋವಾಕ್ಕೆ ಬಂದು ತಲುಪಿದ್ದೇವೆ. ಗೋವಾದಲ್ಲಿ ಎಲ್ಲ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳನ್ನು ತಾಯಿಗೆ ದರ್ಶನ ಮಾಡಿಸಿಕೊಂಡು ನಂತರ ಕರ್ನಾಟಕದ ಅಂಕೋಲಾ, ಗೋಕರ್ಣ, ಉಡುಪಿ, ಮಂಗಳೂರು ಮಾರ್ಗವಾಗಿ ಎಲ್ಲ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಮೈಸೂರಿಗೆ ತೆರಳುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: Israel ರಾಯಭಾರಿಯನ್ನು ಭೇಟಿಯಾದ ನಟಿ ಕಂಗನಾ ರಣಾವತ್; Video