Advertisement

ಬಿಸಿಯೂಟ ಅಡುಗೆ ಸಿಬ್ಬಂದಿಗೆ ಸಮವಸ್ತ್ರ

03:07 PM Nov 29, 2018 | Team Udayavani |

ಹುಣಸೂರು: ಅಕ್ಷರ ದಾಸೋಹ ಯೋಜನೆ ಯಡಿ ಕರ್ತವ್ಯ ನಿರ್ವಹಿಸುವ ತಾಲೂಕಿನ ಎಲ್ಲಾ ಶಾಲೆಗಳ ಅಡುಗೆ ಸಿಬ್ಬಂದಿಗೆ ತಾಲೂಕು ಪಂಚಾಯಿತಿ ಅನುದಾನದಡಿ ಸಮವಸ್ತ್ರ ವಿತರಿಸಲಾಗುವುದು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್‌. ಕೃಷ್ಣಕುಮಾರ್‌ ತಿಳಿಸಿದರು.

Advertisement

ನಗರದ ಶಿಕ್ಷಕರ ಭವನದಲ್ಲಿ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ತಾಲೂಕು ಪಂಚಾಯ್ತಿ ಸಹಯೋಗ ದಲ್ಲಿ ಕಸಬಾ ಮತ್ತು ಗಾವಡಗೆರೆ ಹೋಬಳಿ ವ್ಯಾಪ್ತಿಯ ಅಡುಗೆ ಸಿಬ್ಬಂದಿಗೆ ಬುಧವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶುಚಿ, ರುಚಿ ಆಹಾರ: ಶುಚಿ ಮತ್ತು ರುಚಿಯಾದ ಆಹಾರವನ್ನು ಮಕ್ಕಳಿಗೆ ಒದಗಿಸು ವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಬಿಸಿಯೂಟ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಯಶಸ್ಸಿಗೆ ಅಡುಗೆ ಸಿಬ್ಬಂದಿ ಕೊಡುಗೆ ಅನನ್ಯ. ಅಡುಗೆ ಸಿಬ್ಬಂದಿಯನ್ನು ಮಾಸಿಕ ಗೌರವಧನದ ಆಧಾರದ ಮೇಲೆ ಸೇವಾ ಮನೋಭಾವನೆ ಹೊಂದಿರುವ ಮಹಿಳೆಯರನ್ನು ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ಒಟ್ಟು 727 ಅಡುಗೆ ಸಿಬ್ಬಂದಿಗಳಿದ್ದು. ತಾಪಂ ಅನುದಾನದಡಿ ಸಮವಸ್ತ್ರ ನೀಡಲಾಗುವುದು ಎಂದರು.

ಕಾರ್ಯ ತತ್ಪರತೆ: ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್‌ ಮಾತನಾಡಿ, ಶುಚಿತ್ವ, ಸುರಕ್ಷತೆ ಮತು ಮಿತವ್ಯಯ ಎಂಬ ಮೂರು ನಿಯಮಗಳ ನ್ನಾಧರಿಸಿ ಅಡುಗೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಪ್ರತಿ ವರ್ಷ ಈ ನಿಟ್ಟಿನಲ್ಲಿ ಅಡುಗೆ ಸಿಬ್ಬಂದಿ ಕಾರ್ಯ ತತ್ಪರತೆ ಹೆಚ್ಚಿಸುವ ಸಲುವಾಗಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದರು. 

ಅಡುಗೆ ಪಟ್ಟಿ: ಅಡುಗೆ ದಾಸ್ತಾನು, ಕೊಠಡಿ ಶುಚಿತ್ವ ಕಾಪಾಡಿಕೊಳ್ಳುವ, ಸುರಕ್ಷಿತ ವಾತಾವರಣ ನಿರ್ಮಾಣ ಮತ್ತು ಪರಿಕರಗಳ ಮಿತ ವ್ಯಯದ ಬಳಕೆಯಿಂದ ಅಡುಗೆ ತಯಾರಿಸುವುದು ಬಹುಮುಖ್ಯವಾಗಿದೆ. ಊಟ ಮಾಡುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಕಾರಿ, ದವಸ ಧಾನ್ಯಗಳನ್ನು ಬಳಸುವುದು ಅಗತ್ಯ. ಸರ್ಕಾರ ನಿಗದಿಪಡಿಸಿರುವ ಪಟ್ಟಿಯ ಪ್ರಕಾರ ಅಡುಗೆ ತಯಾರಿಸಬೇಕು ಎಂದು ಸೂಚನೆ ನೀಡಿದರು.

Advertisement

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸಿಬ್ಬಂದಿಗಳ ವೈಯಕ್ತಿಕ ಸ್ವತ್ಛತೆ, ಕೈತೊಳೆಯುವ ವಿಧಾನ, ಕೈಗವಚ ಮತ್ತು ತಲೆಯ ಮೇಲೆ ಬಳಸುವ ಕ್ಯಾಪ್‌ಗ್ಳ ಬಳಕೆಯ ಮಹತ್ವ, ಸಿಬ್ಬಂದಿಗಳ ಆರೋಗ್ಯ ಏರುಪೇರಾದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಚಿಲ್ಕುಂದ ಮಹೇಶ್‌, ತ್ರಿನೇಶ್‌ , ಸೋಮಶೇಖರ್‌ ಮಾಹಿತಿ ನೀಡಿದರು.
ಬಿಆರ್‌ಸಿ ಪಿ.ಮಹದೇವಯ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್‌, ಚನ್ನವೀರಪ್ಪ, ರಂಗಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next