ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮ 10 ಕೋಟಿ ರೂ. ವೆಚ್ಚದಲ್ಲಿ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜತೆಗೆ ಶಾಸಕರಿಗೆ ಚಿನ್ನದ ನಾಣ್ಯ ಉಡುಗೊರೆ ಕೊಡುವ ಪ್ರಸ್ತಾವ ಕೈಬಿಡಿ. ಒಂದೇ ದಿನಕ್ಕೆ ಕಾರ್ಯಕ್ರಮ ಸೀಮಿತಗೊಳಿಸಿ, ದುಂದುವೆಚ್ಚ ಮಾಡದೆ ಅರ್ಥಪೂರ್ಣವಾಗಿ ಆಚರಿಸಿ ಎಂದು ಹೇಳಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಜ್ರ ಮಹೋತ್ಸವ ಸಂಬಂಧ ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಸ್ಪೀಕರ್ ಕೆ.ಬಿ. ಕೋಳಿವಾಡ್, ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ, ಅನಗತ್ಯವಾಗಿ ವಿವಾದ ಮಾಡಿಕೊಳ್ಳುವುದು ಬೇಡ. ಸಾರ್ವಜನಿಕರ ಟೀಕೆಗೆ ಗುರಿಯಾಗದಂತೆ ಎಚ್ಚರ ವಹಿಸಿ ಕಾರ್ಯಕ್ರಮ ಮಾಡಿ ಎಂದು ಹೇಳಿದರು.
ವಜ್ರ ಮಹೋತ್ಸವಕ್ಕೆ 26.87 ಕೋ. ರೂ. ವೆಚ್ಚದ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಹಣಕಾಸು ಇಲಾಖೆಯೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ, 10 ಕೋ. ರೂ. ವೆಚ್ಚದಲ್ಲಿ ಕಾರ್ಯಕ್ರಮ ಮುಗಿಸಿ ಎಂದು ತಿಳಿಸಿದರು ಎಂದು ಹೇಳಲಾಗಿದೆ.
ವಜ್ರ ಮಹೋತ್ಸವದ 2 ದಿನಗಳ ಕಾರ್ಯಕ್ರಮಕ್ಕೆ 26.87 ಕೋ. ರೂ. ಮೊತ್ತದ ಪ್ರಸ್ತಾವನೆ ಸಿದ್ಧ ಪಡಿಸಿ ಸ್ಪೀಕರ್ ಕಾರ್ಯಾಲಯದಿಂದ ಕಳುಹಿಸಿ ಕೊಡಲಾಗಿತ್ತು. ಅದನ್ನು ಈಗ ಹಣಕಾಸು ಇಲಾಖೆ ವಾಪಸ್ ಕಳುಹಿಸಿ 10 ಕೋಟಿ ರೂ. ಪರಿಷ್ಕೃತ ವೆಚ್ಚದ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.
ಚಿನ್ನದ ನಾಣ್ಯ ವಿಚಾರ ಸುಳ್ಳು: ಸಿಎಂ
ಸಮಾರಂಭಕ್ಕೆ ಅನುದಾನ ನೀಡುವುದು ಸರಕಾರ. ಸೋಮವಾರ ರಾತ್ರಿಯಷ್ಟೇ ಕಡತಕ್ಕೆ ಅನುಮೋದನೆ ನೀಡಿದ್ದೇನೆ. ಚಿನ್ನದ ನಾಣ್ಯ ನೀಡುವ ವಿಚಾರ ಸುಳ್ಳು. ಸ್ಮರಣಿಕೆ ನೀಡದಂತೆಯೂ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.