Advertisement

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

07:32 PM Sep 16, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸೆ.17ರಂದು ಆಗಮಿಸಲಿದ್ದು, ಬೆಳಗ್ಗೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆ ಮಾಲಾರ್ಪಣೆ ಮಾಡಿ ನಂತರ ಡಿಎಆರ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸೆ.17ರಂದು ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಈ ಭಾಗದ ಇಲಾಖೆವಾರು ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ ನೀಲನಕ್ಷೆ ತಯಾರಿಸುವ ಬಗ್ಗೆಯೂ ನಿರ್ಧರಿಸಲಾಗುವುದು.

ನಮ್ಮ ಭಾಗದ ಎಲ್ಲ ಶಾಸಕರ ಬೇಡಿಕೆ ಪಟ್ಟಿ ನೋಡಿದರೆ ರಾಜ್ಯದ ಬಜೆಟ್‌ ಗಾತ್ರದಷ್ಟಾಗುತ್ತದೆ. ಆದರೆ ಮ್ಯಾಕ್ರೋ ಯೋಜನೆಯಡಿ ಕಾರ್ಯಕ್ರಮ ತೆಗೆದುಕೊಳ್ಳಲಾಗುವುದು. ಕೊನೆ ಪಕ್ಷ ಈ ಬಾರಿ ಯೋಜನೆಗಳ ಬಗ್ಗೆ ಚರ್ಚಿಸಿದರೆ ಮುಂದಿನ ವರ್ಷವಾದರೂ ಯೋಜನೆ ಬರುತ್ತವೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ಸರ್ಕಾರ ಬಂದ ಮೇಲೆ ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಇಲಾಖೆಯಲ್ಲಿಯೇ 800 ಎಂಜಿನಿಯರ್‌ಗಳ ಹುದ್ದೆ ಭರ್ತಿ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಹಂತ ಹಂತವಾಗಿ ತುಂಬಲಾಗುವುದು ಎಂದರು.

30 ಸಾವಿರ ಹುದ್ದೆ ಭರ್ತಿ:
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌ ಮಾತನಾಡಿ, 2013-18ರ ಅವ ಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 13 ಸಾವಿರ ಶಿಕ್ಷಕರು ಸೇರಿದಂತೆ 30 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮುಂದಿನ ಒಂದು ವರ್ಷದ ಅವ ಧಿಯಲ್ಲಿ 6,500 ಶಿಕ್ಷಕರು ಸೇರಿದಂತೆ 15 ಸಾವಿರ ಖಾಲಿ ಹುದ್ದೆ ತುಂಬಲಾಗುವುದು. ನಂತರ ಎರಡು ವರ್ಷದ ಅವ ಧಿಯಲ್ಲಿ 25 ಸಾವಿರ ಹುದ್ದೆ ತುಂಬಲಾಗುವುದು ಎಂದರು.

Advertisement

ನಮ್ಮ ಸರ್ಕಾರದ ಅವಧಿ  ಮುಗಿಯುವುದರೊಳಗೆ 50 ಸಾವಿರ ಖಾಲಿ ಹುದ್ದೆ ತುಂಬುವುದಾಗಿ ಹಾಗೂ ವಾರ್ಷಿಕ 5000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ನಾಯಕರಾದ ಖರ್ಗೆ ಹಾಗೂ ಸಿಎಂ ಭರವಸೆ ನೀಡಿದ್ದು ಅದಕ್ಕೆ ಬದ್ಧವಾಗಿದ್ದೇವೆ. ಬಿಜೆಪಿಯವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರು ಸಕಾರಾತ್ಮಕ ರಾಜಕೀಯ ಮಾಡದೇ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮತ್ತು ಸತ್ಯಕ್ಕೆ ಸಂಬಂಧವೇ ಇಲ್ಲ ಎಂದರು.

ಎಂಎಲ್‌ಸಿ ಜಗದೇವ ಗುತ್ತೇದಾರ, ಜಿಡಿಎ ಅಧ್ಯಕ್ಷ ಮಜರ್‌ ಆಲಂಖಾನ್‌, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌, ಕಮಿಷನರ್‌ ಡಾ| ಶರಣಪ್ಪ ಸೇರಿದಂತೆ ಇತರರಿದ್ದರು.

ಮುಂದಿನ ಎರಡು ವರ್ಷದಲ್ಲಿ ಕಲ್ಯಾಣ ಪಥ ಯೋಜನೆಯಡಿ ನಮ್ಮ ಭಾಗದ ರಸ್ತೆಗಳ ರಿಪೇರಿ ಹಾಗೂ ಉನ್ನತೀಕರಣ ಮಾಡಲಾಗುವುದು. ಕಲಬುರಗಿ ಹಾಗೂ ಬೀದರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಭಾಗದ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ.
-ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.