ಹುಬ್ಬಳ್ಳಿ: ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಕಾಲ್ಪನಿಕ ವೇತನ ಬಡ್ತಿ ವಂಚಿತರ ಹೋರಾಟ ಸಮಿತಿ ಧಾರವಾಡ ಜಿಲ್ಲಾ ಘಟಕದವರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹಿಂದಿನ ಅನುದಾನ ರಹಿತ ಸೇವೆಯನ್ನು ವೇತನ ನಿಗದಿ, ನಿವೃತ್ತಿಗೆ ಹಾಗೂ ಇತರೆ ಸೌಲಭ್ಯಗಳಿಗೆ ಪರಿಗಣಿಸಲು ಅವಕಾಶವಿಲ್ಲದ್ದರಿಂದ ಸಂಬಂಧಿಸಿದ ಸಿಬ್ಬಂದಿಯು ತುಂಬಾ ತೊಂದರೆ ಹಾಗೂ ವೇತನದಲ್ಲಿ ತಾರತಮ್ಯವುಂಟಾಗಿ ಎಷ್ಟೋ ನೌಕರರು ನಿವೃತ್ತಿ ಸೌಲಭ್ಯ ಪಡೆಯದೆ ನಿವೃತ್ತಿ ಹೊಂದಿದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಇಲಾಖೆ/ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸೇವಾ ಅವಧಿಯನ್ನು ನೇಮಕಾತಿ ದಿನಾಂಕದಿಂದ ವೇತನ ನಿಗದಿ, ಪಿಂಚಣಿ, ಸೇವಾ ಜೇಷ್ಠತೆ ಹಾಗೂ ಇತರೆ ಸೌಲಭ್ಯಗಳನ್ನು ನ್ಯಾಯಾಲಯದ ತೀರ್ಪಿನನ್ವಯ ಪರಿಗಣಿಸಬೇಕು.
ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕಾಲ್ಪನಿಕ ವೇತನ ನಿಗದಿಪಡಿಸಲು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಶಿಫಾರಸ್ಸುಗಳನ್ನು ಕೂಡಲೇ ಜಾರಿಗೊಳಿಸಬೇಕು.
ಖಾಸಗಿ ಶಾಲಾ-ಕಾಲೇಜುಗಳ ಸಿಬ್ಬಂದಿಗಳನ್ನು ಅನುದಾನಕ್ಕೊಳಪಡಿಸುವಾಗ ಅವರ ಅನುದಾನ ರಹಿತ ಸೇವೆಯನ್ನು ವೇತನ ನಗದೀಕರಣ, ಜೇಷ್ಠತೆ, ನಿವೃತ್ತಿ ವೇತನ ಇನ್ನಿತರೆ ಸೌಲಭ್ಯಗಳಿಗೆ ಪರಿಗಣಿಸುವ ಆದೇಶವನ್ನು ಸರಕಾರ ರದ್ದುಪಡಿಸಿದ್ದು, ಅದನ್ನು ಹಿಂಪಡೆಯಬೇಕು.
ನೌಕರರು ಸೇವೆಗೆ ಸೇರಿದ ದಿನಾಂಕದಿಂದಲೇ ವೇತನ ನಿಗದಿಪಡಿಸುವುದನ್ನು ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ನೌಕರರಿಗೂ ಅನ್ವಯಿಸಬೇಕು ಸೇರಿದಂತೆ ಇನ್ನಿತರೆ ನ್ಯಾಯಯುತ ಸಿಗಬೇಕಾದ ಸೌಲಭ್ಯಗಳನ್ನು ನೌಕರರಿಗೆ ತಕ್ಷಣ ದೊರಕಿಸಿಕೊಡಬೇಕೆಂದು ಸಮಿತಿಯ ಕೇಂದ್ರ ಸಂಚಾಲಕ ಎಸ್.ಎನ್. ಗಡದಿನ್ನಿ, ಅಧ್ಯಕ್ಷ ಜಿ.ಎಂ. ಹೊಸಮನಿ, ಪ್ರಧಾನ ಕಾರ್ಯದರ್ಶಿ ಆರ್.ಎಚ್. ಪಾಟೀಲ ಮೊದಲಾದವರು ಒತ್ತಾಯಿಸಿದರು.