ಹುಬ್ಬಳ್ಳಿ: ಪಾಸ್ಲಿಕ್ ಬಾಟಲಿಗಳನ್ನು ಬಳಸಿಕೊಂಡು ವಿಜ್ಞಾನ ಮಾದರಿಗಳನ್ನು ಮಾಡುವ ಮೂಲಕ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಸಹಾಯ ಮಾಡುವುದಲ್ಲದೆ, ವಿಜ್ಞಾನ ಮಾದರಿಗಳ ಕುರಿತಾಗಿ ತರಬೇತಿ, ಮಾಹಿತಿ ನೀಡಿಕೆಕಾರ್ಯವನ್ನು ಇಲ್ಲಿನ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಮುಖ್ಯಸ್ಥ ಶಿವಾನಂದ ಚಲವಾದಿ ಮಾಡುತ್ತಿದ್ದಾರೆ.
ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯ ಶಿವಾನಂದ ಚಲವಾದಿ, ಹತ್ತು ವರ್ಷಗಳಿಂದ ಪ್ರತಿಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 300ಕ್ಕೂ ಅಧಿಕ ಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳಿಂದ 50ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ರೂಪಿಸಿ ಗಮನ ಸೆಳೆದಿದ್ದಾರೆ.
ಸುಲಭವಾಗಿ ಸಿಗುವಂತಹ ವಸ್ತುಗಳಿಂದ ಈಗಾಗಲೇ ಅಮೇಜಿಂಗ್ ಸೈನ್ಸ್ ಕಿಟ್(ಆಸ್ಕ್), ಸೈನ್ಸ್ ಪ್ರ್ಯಾಕ್ಟಿಕಲ್ ಆ್ಯಂಡ್ ರೀಡಿಂಗ್ ಕಿಟ್(ಸ್ಪಾರ್ಕ್) ಎಂಬ ವಿನೂತನ ಕಿಟ್‌ಗಳನ್ನು ತಯಾರಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.
ಯಾವ್ಯಾವ ವಿಜ್ಞಾನ ಮಾದರಿಗಳು: ಜಲಚಕ್ರ, ತಳವಿಲ್ಲದ ಬಾವಿ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ನೀರಿನ ಒತ್ತಡ, ಪೇರಿಸ್ಕೋಪ್, ಎಂಜಿನ್ ಮಾದರಿ, ನ್ಯೂಟನ್ನನ ಮಾದರಿ, ಅಟೋಮೈಜರ್, ದೃಷ್ಟಿಯ ಆಳ, ಜಲಾಂರ್ತಗಾಮಿ , ನೀರಿನ ಸುಳಿ, ಮಾನವನ ಶ್ವಾಸಕೋಶದ ಮಾದರಿ, ಬರ್ನೋಲಿಯ ತತ್ವ, ಸ್ಟೆತೊಸ್ಕೋಪ್, ನೀರಿನ ಕಾರಂಜಿ, ಬೆಳಕು ಪ್ರಯೋಗ(ಮಸೂರಗಳು), ಘನ ವಸ್ತುಗಳಲ್ಲಿ ಶಬ್ದ ಪ್ರಸರಣ, ನಿಶ್ಚಲ ಜಡತ್ವ, ಚಲನೆಯ ಜಡತ್ವ, ಬೆಳಕಿನ ವಕ್ರಿಭವನ, ಪೀನ ಮಸೂರದಲ್ಲಿ ವಸ್ತುವಿನ ಸ್ಥಾನ, ಗುರುತ್ವ ಕೇಂದ್ರ, ಫಾಸ್ಕಲ್ ನಿಯಮ, ನ್ಯೂಟನ್ ಕಾರು, ಪ್ರತ್ಛನ್ನ ಶಕ್ತಿ, ಚಲನ ಶಕ್ತಿ, ಮಳೆ ಮಾಪಕ, ಹೈಡ್ರೋಲಿಕ್ ಜಾಕ್ ಸೇರಿದಂತೆ ವಿವಿಧ ಮಾದರಿಗಳನ್ನು ಸಿದ್ಧಪಡಿಸಿದ್ದು, ಇನ್ನಷ್ಟು ಮಾದರಿಗಳ ತಯಾರಿಕೆಗೆ ಮುಂದಾಗಿದ್ದಾರೆ.
ವಿಜ್ಞಾನ ಮಾದರಿಗಳ ತಯಾರಿಕೆ ಕುರಿತಾಗಿ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಇಂತಹ ಮಾದರಿಗಳ ತಯಾರಿಕೆಗೆ ಹಚ್ಚುವ ನಿಟ್ಟಿನಲ್ಲಿ ಉತ್ತೇಜನ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ಕೆರಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಅತ್ಯಂತ ಕಡಿಮೆ ದರದಲ್ಲಿಯೇ ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಬಹುದಾಗಿದೆ. “ಬಾಟಲಿಯೊಳಗಿನ ವಿಜ್ಞಾನ’ ಎಂಬ ಪುಸ್ತಕವನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ಹೊರತರುವ ಇಚ್ಛೆ ಹೊಂದಿದ್ದೇನೆ.ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು.
ಶಿವಾನಂದ ಚಲವಾದಿ, ಮುಖ್ಯಸ್ಥ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ
– ಬಸವರಾಜ ಹೂಗಾರ