ಕೆಂಗೇರಿ: “ವಿಜ್ಞಾನ, ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಗಳು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿವೆ,’ ಎಂದು ವಿಕ್ರಂಸಾರಾಬಾಯಿ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ.ಬಿ.ಎಂ.ಸುರೇಶ್ ಅಭಿಪ್ರಾಯಪಟ್ಟಿದ್ದಾರೆ. ಕೆಂಗೇರಿ ಸಮೀಪದ ಕಂಬೀಪುರದ ಎ.ಸಿ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 5ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
“ವಿಶ್ವದ ಅಗ್ರಮಾನ್ಯ ಅಭಿವೃದ್ಧಿ ಶೀಲ ರಾಷ್ಟ್ರವಾಗುವ ದಿಕ್ಕಿನತ್ತ ಭಾರತ ದಾಪುಗಾಲು ಹಾಕಲು ಯುವ ಜನಾಂಗದ ಸೃಜನ ಶೀಲತೆ, ಕ್ರಿಯಾತ್ಮಕ ಕಾರ್ಯದಕ್ಷತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆ ಹಾಗೂ ಪೋಷಕರ ಪಾತ್ರ ಹಾಗೂ ಪ್ರಭಾವವಿರುವುದರಿಂದ ಅವರಿಗೆ ಗೌರವ ಸಲ್ಲಿಸುವ ಅಗತ್ಯವೂ ಇದೆ,’ ಎಂದು ತಿಳಿಸಿದರು.
“ವಿದ್ಯಾರ್ಥಿಗಳು ಗುರಿಯೊಂದಿಗೆ ಉತ್ತಮ ದ್ಯೆàಯೋದ್ಧೇಶಗಳ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ದೇಶದಲ್ಲಿಯೇ ವಿಫುಲವಾದ ಅವಕಾಶವಿರುವುದರಿಂದ ಯುವ ಪ್ರತಿಭೆಗಳು ಯಾವುದೋ ಕಾರಣಕ್ಕೂ ಪ್ರತಿಭಾ ಪಲಾಯನ ಮಾಡದೇ ದೇಶದಲ್ಲಿಯೇ ಕಾರ್ಯನಿರ್ವಹಿಸಿ ಇತರರಿಗೆ ಮಾದರಿಯಾಬೇಕು. ಈ ಮೂಲಕ ಉದ್ಯೋಗ ಸೃಷ್ಟಿ ಹಾಗೂ ಉದ್ಯಮ ಶೀಲತೆಗೆ ಹೆಚ್ಚಿನ ಆದ್ಯತೆ ನೀಡಬೇಕು,’ ಎಂದರು.
ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಮುಖ್ಯಸ್ಥ ಎ.ಸಿ.ಷಣ್ಮುಗಂ, “ದೇಶದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುವುದರಿಂದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಿ, ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡಲಾಗುತ್ತಿದೆ. ರಾಜರಾಜೇಶ್ವರಿ ವೈದ್ಯಕೀಯ ಸಂಸ್ಥೆಯಲ್ಲಿ ಬಡವರು, ಮಧ್ಯಮ ವರ್ಗದವರಿಗಾಗಿ ರಿಯಾಯಿತಿ ದರದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಚಿಕಿತ್ಸೆ ನೀಡಲಾಗುತ್ತಿದೆ,’ ಎಂದು ತಿಳಿಸಿದರು.
ಪದ್ಮಭೂಷಣ ಡಾ.ವಾಸಗಂ, ಎಂಪಸಿಸ್ ಸಂಸ್ಥೆಯ ವಿದ್ಯಾರಣ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮುರಳಿ, ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಕಾರ್ಯಕಾರಿ ಅಧಿಕಾರಿ ಸಿ.ಎನ್.ಸೀತಾರಾಂ ಮತ್ತಿತರರು ಉಪಸ್ಥಿತರಿದ್ದರು.