Advertisement
ಸರ್ಕಾರದ ಆದೇಶದಂತೆ ಈಗಾಗಲೇ ಜಿಲ್ಲಾದ್ಯಂತ ಹಿರಿಯ ಮತ್ತು ಪ್ರೌಢ ಶಾಲೆಗಳು ಆರಂಭವಾಗಿದೆ. ಸೋಮವಾರದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿ 780 ಶಾಲೆಗಳಲ್ಲೂ ಕಿರಿಯ ಪ್ರಾಥಮಿಕ ಹಂತದ 1ರಿಂದ 5ನೇ ತರಗತಿಗಳು ಕೂಡ ಪ್ರಾರಂಭವಾದವು. ಇದರೊಂದಿಗೆ ಹಿರಿಯ ಮಕ್ಕಳೊಂದಿಗೆ ಕಿರಿಯರು ಕೂಡಿಕೊಂಡು ಶಾಲಾ ಆವರಣಗಳಲ್ಲಿ ಚಿಲಿಪಿಲಿ ವಾತಾವರಣ ಮೂಡಿತ್ತು.
Related Articles
Advertisement
ನಗರ ಪ್ರದೇಶದಲ್ಲಿ ಉತ್ಸಾಹ
ಮೊದಲ ದಿನವೇ ಚಿಣ್ಣರು ಸಂಭ್ರಮದಿಂದಲೇ ಶಾಲೆಗಳಿಗೆ ಬಂದರು. ಪ್ರಸಕ್ತ ವರ್ಷದಲ್ಲಿ 1ರಿಂದ 5ನೇ ತರಗತಿಗಳಿಗೆ ಒಟ್ಟಾರೆ 2.79 ಮಕ್ಕಳು ನೋಂದಾಣಿ ಮಾಡಿಕೊಂಡಿದ್ದು, ಸೋಮವಾರ ಜಿಲ್ಲಾದ್ಯಂತ ಉತ್ತಮ ಹಾಜರಾತಿ ಇತ್ತು. ಇದರಲ್ಲಿ ನಗರ ಪ್ರದೇಶದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂತು. ಕಲಬುರಗಿ ನಗರದಲ್ಲಿ ಒಟ್ಟಾರೆ ಮಕ್ಕಳು ಹಾಜರಾತಿ ಶೇ.44ರಷ್ಟು ಇದ್ದರೆ, ಜಿಲ್ಲಾದ್ಯಂತ ಶೇ.25ರಷ್ಟು ಮಕ್ಕಳು ತರಗತಿಗಳಿಗೆ ಹಾಜರಾದರು. ಹಿರಿಯ ಪ್ರಾಥಮಿಕ ಶಾಲೆಗಳು ಆರಂಭವಾದ ನಂತರ ಕಿರಿಯ ಪ್ರಾಥಮಿಕ ತರಗತಿಗಳ ಪ್ರಾರಂಭದ ಬಗ್ಗೆ ಪೋಷಕರು ವಿಚಾರಿಸುತ್ತಿದ್ದರು. ಸೋಮವಾರ ಈ ತರಗತಿಗಳು ಆರಂಭವಾದ ಕಾರಣ ಉತ್ತಮ ಪ್ರಕ್ರಿಯೆ ದೊರೆತಿದೆ.
ನಮ್ಮ ಶಾಲೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಒಟ್ಟು 204 ಮಕ್ಕಳು ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನವೇ 114 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ ಎಂದು ಆದರ್ಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಮಡಿವಾಳಮ್ಮ ಪಾಟೀಲ ತಿಳಿಸಿದರು.
ಶಾಲೆಗಳು ಆರಂಭವಾಗದ ಕಾರಣ ಇಷ್ಟು ದಿನ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸಲಾಗುತ್ತಿತ್ತು. ಚಿಕ್ಕವರು ಆಗಿದ್ದರಿಂದ ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದರು. ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆ ಮಕ್ಕಳ ಕಲಿಕೆ ಅನುಕೂಲವಾಗಲಿದೆ. ಶಾಲೆಗೆ ಬಾರದ ಮಕ್ಕಳಿಗೆ ಆನ್‌ಲೈನ್ ತರಗತಿ ಸಹ ಮುಂದುವರೆಸಲಾಗುತ್ತದೆ ಎಂದು ಮಾತೋಶ್ರಿ ರಮಾಬಾಯಿ ಅಂಬೇಡ್ಕರ್ ಸರ್ಕಾರಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಗಡೇದ್ ಹೇಳಿದರು.
ನ.2 ರಿಂದ ಬಿಸಿಯೂಟ ನ.2 ರವೆರೆಗೆ ಐದೂ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ. ಆದ್ದರಿಂದ ಬಿಸಿಯೂಟ ಕೂಡ ನ.2ರ ನಂತರವೇ ಆರಂಭವಾಗಲಿದೆ. ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಿತ್ಯವೂ ಬಿಸಿಯೂಟ ಇರಲಿದೆ. ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಸ್ವಯಂ ದೃಢೀಕರಣ ಪತ್ರ ನೀಡುವುದು ಕಡ್ಡಾಯ ಮಾಡಲಾಗಿದೆ.