Advertisement

ಶಾಲಾ ಅಂಗಳದಲ್ಲಿ ಮತ್ತೆ ಚಿಣ್ಣರ ಕಲರವ

01:29 PM Oct 26, 2021 | Team Udayavani |

ಬೀದರ: ಹೆಮ್ಮಾರಿ ಕೋವಿಡ್‌ ಆರ್ಭಟದಿಂದ ಸುದೀರ್ಘ‌ ಎರಡು ವರ್ಷಗಳಿಂದ ಬಿಕೋ ಎನ್ನುತ್ತಿದ್ದ ಶಾಲೆಗಳಲ್ಲಿ ಈಗ ಚಿಣ್ಣರ ಕಲರವ ಶುರುವಾಗಿದೆ.

Advertisement

ಸೋಂಕು ನಿಯಂತ್ರಣ ಹಿನ್ನಲೆ ಭೌತಿಕ ತರಗತಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿರುವ ಹಿನ್ನೆಲೆ ಸೋಮವಾರದಿಂದ ಮಕ್ಕಳು ಸಂತಸ-ಸಂಭ್ರಮದೊಂದಿಗೆ ವಿದ್ಯಾ ದೇಗುಲದತ್ತ ಹೆಜ್ಜೆ ಹಾಕಿದ್ದಾರೆ.

ಮನೆಯಲ್ಲಿ ಬಂಧಿಯಾಗಿದ್ದ ಮಕ್ಕಳು ಮೊದಲ ದಿನ ಪೋಷಕರ ಕೈ ಹಿಡಿದು ಶಾಲೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಸಂಭ್ರಮಿಸಿದರು. ಆನ್‌ಲೈನ್‌ ತರಗತಿ ವೇಳೆ ಫೋನ್‌ನ ಸ್ಕ್ರೀನ್‌ನಲ್ಲಿ ಮಾತ್ರ ಶಿಕ್ಷಕರು, ಸ್ನೇಹಿತರನ್ನು ಕಾಣುತ್ತಿದ್ದ ಮಕ್ಕಳು ಶಾಲೆಗೆ ಬರುತ್ತಲೇ ಪ್ರತ್ಯಕ್ಷವಾಗಿ ಅವರನ್ನು ಕಂಡು ಖುಷಿಪಟ್ಟರು.

ಪುಟಾಣಿಗಳ ಓಡಾಟ, ಸಂಚಲನದಿಂದ ಪ್ರಾಥಮಿಕ ಶಾಲೆಗಳು ಮತ್ತೆ ಜೀವ ಪಡೆದಂತಾದವು. ಬೆಳಿಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಪ್ರಾರ್ಥನೆಗೆ ಹಾಜರಾದ ಮಕ್ಕಳನ್ನು ಬಹುತೇಕ ಕಡೆಗಳಲ್ಲಿ ಶಿಕ್ಷಕರು ಪುಷ್ಪ ವೃಷ್ಟಿ, ಸಿಹಿ ಕೊಟ್ಟು ಬರ ಮಾಡಿಕೊಂಡರು. ಇನ್ನೂ ಕೆಲವೆಡೆ ತಳಿರು-ತೋರಣ ಕಟ್ಟಿ, ರಂಗೋಲಿ ಹಾಕಿ, ಜತೆಗೆ ಆರತಿಯನ್ನು ಬೆಳಗಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡದ್ದು ವಿಶೇಷವಾಗಿತ್ತು.

ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಲಾಯಿತು. ಇದೇ ವೇಳೆ ಮಕ್ಕಳಿಗೆ ಕೋವಿಡ್‌ ಮಾರ್ಗಸೂಚಿ ಪಾಲನೆ ಬಗ್ಗೆ ಕಿವಿಮಾತು ಹೇಳಲಾಯಿತು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ಕೈಗೆ ಸ್ಯಾನಿಟೈಸರ್‌ ಹಚ್ಚಿ ಸ್ವಚ್ಛತೆ ಕಾಪಾಡುವ ಬಗ್ಗೆ ತಿಳಿಸಲಾಯಿತು. ಶಿಕ್ಷಕರು ಸಹ ಆಸಕ್ತಿಯಿಂದ ಪಾಠ ಮಾಡಿ ಉತ್ಸಾಹ ತೋರಿದರು.

Advertisement

ಇದನ್ನೂ ಓದಿ: ಸ್ಪಚ್ಛತೆಯಿಂದ ರೋಗ ಮುಕ್ತ ಸಮಾಜ ನಿರ್ಮಾಣ

ಪಾಲಕರಲ್ಲಿ ಕೋವಿಡ್‌ ಆತಂಕ ಇನ್ನೂ ಇದೆ. ಹಾಗಾಗಿ ಮೊದಲ ದಿನ ಮಕ್ಕಳ ಗೈರು ಕಂಡು ಬಂತು. ಶೇ.50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ. ಸದ್ಯ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಎರಡು ಡೋಸ್‌ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಯಿತು. ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 775 ಕಿರಿಯ ಪ್ರಾಥಮಿಕ ಶಾಲೆ, 1350 ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 85,823 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,71,126 ಮಕ್ಕಳು 1ರಿಂದ 5ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಜಿಲ್ಲಾದ್ಯಂತ ಮೊದಲ ದಿನ ಶೇ.25ರಷ್ಟು ಮಕ್ಕಳು ಹಾಜರಾಗಿದ್ದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀದರ ಜಿಲ್ಲೆಯಲ್ಲಿಯೂ ಸರ್ಕಾರದ ನಿರ್ದೇಶನದಂತೆ ಸೋಮವಾರದಿಂದ 1ರಿಂದ 5ರವರೆ ಭೌತಿಕ ತರಗತಿಗಳು ಆರಂಭಿಸಲಾಗಿದೆ. ಮಕ್ಕಳು ಸಂಭ್ರಮದಿಂದ ಹಾಜರಾಗುತ್ತಿದ್ದು, ಮೊದಲ ದಿನ ಶೇ.25ರಷ್ಟು ಹಾಜರಾತಿ ಇತ್ತು. ಸುದೀರ್ಘ‌ ಎರಡು ವರ್ಷಗಳ ನಂತರ ತರಗತಿ ಶುರುವಾಗಿರುವ ಹಿನ್ನೆಲೆ ಆರಂಭದ ಒಂದು ವಾರ ಬ್ರಿಜ್‌ ಕೋರ್ಸ್‌ ಗಳನ್ನು ನಡೆಸಿ, ಬಳಿಕ ಪಠ್ಯ ಕ್ರಮದ ಪಾಠ ಶುರು ಮಾಡಲಾಗುವುದು. -ಗಂಗಣ್ಣ ಸ್ವಾಮಿ, ಡಿಡಿಪಿಐ, ಬೀದರ

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next