Advertisement

School; ಮಕ್ಕಳ ಜೀವದ ಜತೆ ಚೆಲ್ಲಾಟವಾಡುವ ದುಷ್ಕರ್ಮಿಗಳ ಪತ್ತೆ ವಿಳಂಬ ಬೇಡ

10:54 PM Dec 01, 2023 | Team Udayavani |

ರಾಜಧಾನಿ ಹಾಗೂ ಸುತ್ತಲಿನ 68 ಪ್ರತಿಷ್ಠಿತ ಶಾಲೆಗಳ ಆವರಣದಲ್ಲಿ ಸ್ಫೋಟಕ ವಸ್ತುಗಳನ್ನಿಡಲಾಗಿದೆ ಎಂಬ ಅನಾಮಧೇಯ ಇ-ಮೇಲ್‌ವೊಂದು ಇಡೀ ದಿನ ಬೆಂಗಳೂರಿನ ನಾಗರಿಕರನ್ನು ಆತಂಕಕ್ಕೆ ದೂಡಿತ್ತು. ಅದರಲ್ಲೂ ವಿಶೇಷವಾಗಿ ಇ-ಮೇಲ್‌ ಸ್ವೀಕರಿಸಿದ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಅನುಭವಿಸಿದ ಭಯ-ಭೀತಿ-ಆತಂಕವನ್ನು ಯಾವುದೇ ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಮುಂಜಾನೆ ಸಮಯ 6.08 ಕ್ಕೆ ಇ-ಮೇಲ್‌ ಸಂದೇಶ ಶಾಲೆಗಳಿಗೆ ತಲುಪಿದೆ. ಆದರೆ ಇ-ಮೇಲ್‌ ಸಂದೇಶವನ್ನು ಶಾಲಾ ಆಡಳಿತ ಮಂಡಳಿಗಳು ಸುಮಾರು 8.30ರ ವೇಳೆಗೆ ನೋಡುವಷ್ಟರಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆಗಳ ಒಳಗಡೆ ಸೇರಿದ್ದರು. ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಬಾಂಬ್‌ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಎಲ್ಲಿಯೂ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ, ಇದೊಂದು ಹುಸಿ ಬಾಂಬ್‌ ಕರೆ ಎಂದು ಖಚಿತವಾದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಅಷ್ಟೊತ್ತಿಗಾಗಲೇ ಶಾಲೆಗಳಿಗೆ ಮಕ್ಕಳನ್ನು ಬಿಟ್ಟು ಮನೆ ಇಲ್ಲವೇ ಕಚೇರಿಗಳಿಗೆ ತೆರಳಿದ್ದ ಪೋಷಕರಿಗೆ ಸುದ್ದಿ ಮುಟ್ಟುತ್ತಿದ್ದಂತೆ ಹೈರಾಣಾಗಿದ್ದರು.

Advertisement

ಒಂದಲ್ಲ-ಎರಡಲ್ಲ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪ್ತಿಗೆ ಸೇರಿದ ಒಟ್ಟು 68 ಶಾಲೆಗಳಿಗೆ ಮುಜಾಹಿದ್ದೀನ್‌ ಸಂಘಟನೆ ಹೆಸರಲ್ಲಿ ಬಾಂಬ್‌ ಬೆದರಿಕೆ ಮೇಲ್‌ ರವಾನೆಯಾಗಿದೆ. ಅದರಲ್ಲಿ ಮುಂಬಯಿಯ ತಾಜ್‌ ಹೊಟೇಲ್‌ ಮೇಲೆ ನಡೆದ ದಾಳಿಯಂತೆ ದಾಳಿ ಮಾಡುತ್ತೇವೆ, ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ಸಿದ್ಧರಾಗಿ ಇಲ್ಲವೇ ಸಾಯಲು ರೆಡಿ ಯಾಗಿರಿ ಎಂದು ಧರ್ಮದ ಹೆಸರಲ್ಲಿ ಬೆದರಿಸಿ ಬರೆಯಲಾಗಿದೆ. ಇದೊಂದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಈ ರೀತಿ ಸಾರಸಗಟಾಗಿ ಶಾಲೆಗಳಿಗೆ ಮೇಲ್‌ ರವಾನೆಯಾಗಬೇಕಿದ್ದರೆ ಇದರ ಹಿಂದೆ ಸಾಕಷ್ಟು ಕಸರತ್ತುಗಳು ನಡೆ ದಿವೆ. ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ನಿಜಕ್ಕೂ ದೊಡ್ಡ ಸವಾಲು. ಏಕೆಂದರೆ ಈ ರೀತಿಯ ಕೃತ್ಯಗಳನ್ನು ಮಾಡುವವರು ಯಾವಾಗಲೂ ಸೇಫ್ಗೇಮ್‌ ಆಡುತ್ತಾರೆ. ಫೇಕ್‌ ಮೇಲ್‌ ಐಡಿ ಸೃಷ್ಟಿಸಿ ಯಾವುದೋ ಸಂಘಟನೆ ಹೆಸರನ್ನು ಉಲ್ಲೇಖೀಸಿ ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡುತ್ತಾರೆ. ಹೀಗಾಗಿ ಪಾಪಿಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲ ಭವಲ್ಲ. ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಇದೊಂದು ಹುಸಿ ಬಾಂಬ್‌ ಕರೆ ಎಂದು ಸರಕಾರ ನಿರ್ಲಕ್ಷಿಸದೆ, ಗಂಭೀರವಾಗಿ ಪರಿಗಣಿಸಿ ತನಿಖೆಯಲ್ಲಿ ವಿಳಂಬ ಮಾಡದೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿನ ಶಿಕ್ಷೆ ವಿಧಿಸಲು ಮುಂದಾಗಬೇಕು.

ಸರಕಾರವೇನೋ ಧೈರ್ಯವಾಗಿರಿ, ಆತಂಕಪಡಬೇಡಿ ಎಂಬ ಮಾತು ಹೇಳಿರಬಹುದು, ಆದರೆ ಸೋಮವಾರ‌ ಶಾಲೆಗಳು ಮತ್ತೆ ತೆರೆದಾಗ ಸಹಜ ವಾಗಿಯೇ ಪೋಷಕರಲ್ಲಿ ಇದೇ ಆತಂಕ ಇನ್ನೂ ಇದ್ದೇ ಇರುತ್ತದೆ. ಎಲ್ಲ ಶಾಲೆಗಳಿಗೂ ಸರಕಾರ ಭದ್ರತೆ ಕೊಡುವುದು ಅಸಾಧ್ಯದ ಮಾತು. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಗಳೇ ದಿನದ 24 ಗಂಟೆಯೂ ತಮ್ಮ ಸಂಸ್ಥೆಗಳ ಸುರಕ್ಷೆ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರ ಣಗಳನ್ನು ಬಳಸಿಕೊಂಡು ಕಣ್ಗಾವಲು ಇಟ್ಟರೆ ವಿದ್ಯಾರ್ಥಿಗಳು ಧೈರ್ಯವಾಗಿ ಶಾಲೆಗಳ ಒಳಗಡೆ ಬರುತ್ತಾರೆ ಇಲ್ಲದೆ ಇದ್ದರೇ ಇದು ನಿತ್ಯದ ಗೋಳು ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next