ಹನುಮಸಾಗರ: ಯರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಊಟದ ಕೊಠಡಿ ನಿರ್ಮಾಣಕ್ಕಾಗಿ ಗಿಡ-ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಹನ್ನೆರಡು ಸಾವಿರ ರೂ. ದಂಡ ಹಾಕಲಾಗಿದೆ.
ಶಾಲಾ ಆವರಣದ ಅಡುಗೆ ಕೊಠಡಿ ಪಕ್ಕ ಊಟದ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಗ್ರಾಪಂ ಸದಸ್ಯರು ನಿರ್ಣಯಿಸಿದ್ದರು. ಅದಕ್ಕಾಗಿ ಮೂರು ಬೇವಿನ ಮರ ಮತ್ತು ಎರಡು ಆಕಾಶ ಮಲ್ಲಿಗೆ ಗಿಡಗಳನ್ನು ಕತ್ತರಿಸಲಾಗಿತ್ತು. ವಿಷಯ ತಿಳಿಯುತ್ತಲೇ ಅರಣ್ಯಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಗಿಡಗಳ ಮಾರಣ ಹೋಮ ಹಾಗೂ ಸರ್ಕಾರಿ ಆಸ್ತಿ ಹಾಳು ಮಾಡಲಾಗಿದೆ ಎಂದು ಈ ಕ್ರಮ ಜರುಗಿಸಿದ್ದಾರೆ.
ಈ ಊಟದ ಕೊಠಡಿ ಕಾಮಗಾರಿ ಬಗ್ಗೆ ಎಸ್‌ಡಿಎಂಸಿ ಸದಸ್ಯರಾಗಲಿ, ಗ್ರಾಪಂ ಸದಸ್ಯರಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ಹೇಮಲೆಪ್ಪ ನಾಯಕ್. ಈ ನಡುವೆ ಸ್ಪಷ್ಟ-ಸಮರ್ಪಕ ಮಾಹಿತಿ ಸಿಗದ ಕಾರಣ ಪಾಲಕರು ಕಾಮಗಾರಿ ತಡೆದಿದ್ದಾರೆ.
ಊಟದ ಕೊಠಡಿ ನಿರ್ಮಾಣ ಜಾಗದಲ್ಲಿರುವ ಕೊಳವೆಬಾವಿಗೆ ಮೋಟಾರ್ ಇಳಿಸಿದರೆ ನೀರು ದೊರೆಯುತ್ತಿತ್ತು. ಆದರೆ ಅದನ್ನು ಮುಚ್ಚಿದ್ದಾರೆ. ಗ್ರಾಪಂನಿಂದ ಎನ್‌ಆರ್‌ಐಜಿ ಯೋಜನೆಯಡಿ 19 ಲಕ್ಷ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಶುರು ಮಾಡಿದ್ದರು. ಈ ಸ್ಥಳದಲ್ಲಿ ಬಾತರೂಮ್ ಪಿಟ್ ಇದ್ದರೂ ಲೆಕ್ಕಿಸದೇ ಕಾಲಂ ಹಾಕಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅತಂತ್ರ: ಕಳೆದ ಆರು ತಿಂಗಳಿನಿಂದ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನ ಖಾಲಿ ಇದೆ. ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ನಡೆದ ಹಿನ್ನೆಲೆಯಲ್ಲಿ ಆ ಸ್ಥಾನ ಖಾಲಿ ಉಳಿದಿದೆ. ಎಸ್‌ಡಿಎಂಸಿ 15 ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಳಿಕ ವಾಪಸ್ ಪಡೆಯುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಮನವಿ ಸಲ್ಲಿಸಿದ್ದಾರೆ. ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ರಾಜೀನಾಮೆ ವಾಪಸು ಪಡೆಯುವ ಅರ್ಜಿಗಳನ್ನು ವರದಿ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಇಂತಹ ಸಮಯದಲ್ಲಿ ಕಾಮಗಾರಿ ಬೇಡವೆಂದರೂ ನಡೆಸಲಾಗುತ್ತಿದೆ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಶರಣಮ್ಮ ಕನಕಪ್ಪ ಯಲಬುಣಚಿ ಆರೋಪಿಸಿದ್ದಾರೆ.
ಊಟದ ಕೊಠಡಿ ಕಾಮಗಾರಿ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರನ್ನು ಕೇಳಿದರೂ ಸಮರ್ಪಕ ಮಾಹಿತಿ ಸಿಗುತ್ತಿಲ್ಲ.
-ಶರಣಪ್ಪ ಕಟಾಪುರ, ಪರಶುರಾಮ ಉಪ್ಪಾರ, ಶರಣಪ್ಪ ಮಂಡಲಮರಿ ಪಾಲಕರು
ಕೆಲ ದಿನಗಳ ಹಿಂದೆ ಕೊಳವೆ ಬಾವಿಯನ್ನು ಪರೀಕ್ಷಿಸಿದಾಗ ನೀರು ಇರುವುದು ಕಂಡುಬಂದಿತ್ತು. ಆದರೆ ಮೋಟಾರ್ ಸುಟ್ಟು ಹೋಗಿದ್ದರಿಂದ ಅದನ್ನು ಹಾಗೆ ಬಿಡಲಾಗಿತ್ತು.
-ಶೇಖದಾದು, ಯರಗೇರಿ ಗ್ರಾಪಂ ಪಿಡಿಒ
ಊಟದ ಕೊಠಡಿಗೆ ಸಂಬಂಧಿಸಿದಂತೆ ಸೋಮವಾರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸುರೇಂದ್ರ ಕಾಂಬ್ಳೆ, ಕುಷ್ಟಗಿ ಬಿಇಒ
ವಸಂತಕುಮಾರ ಸಿನ್ನೂರ