Advertisement

ದಸರಾ ನಂತರವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ!

08:25 AM Aug 22, 2021 | Team Udayavani |

ಬೆಂಗಳೂರು: ಸೋಮವಾರದಿಂದ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಲು ಶಾಲೆಗೆ ಬರಲಿದ್ದಾರೆ. ಆದರೆ, ಹೊಸ ಸಮವಸ್ತ್ರದಲ್ಲಿ ಬರಲು ಸಾಧ್ಯವಿಲ್ಲ. ಹಿಂದಿನ ವರ್ಷದ ಸಮವಸ್ತ್ರವನ್ನೇ ಧರಿಸಿ ಶಾಲಾವರಣ ಪ್ರವೇಶಿಸಲಿದ್ದಾರೆ. ಸಮವಸ್ತ್ರ ಕೈಸೇರಲು ಕನಿಷ್ಠ3 ತಿಂಗಳುಕಾಯಬೇಕಿದೆ.

Advertisement

2020-21ನೇ ಸಾಲಿನಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆಯದೇ ಇರುವುದರಿಂದ ಕೇವಲ ಒಂದು ಜತೆ ಸಮವಸ್ತ್ರ ಮಾತ್ರ ನೀಡಲಾಗಿತ್ತು. ಅದು ಕೂಡ, 2019-20ನೇ ಸಾಲಿನಲ್ಲಿ ಹಂಚಿಕೆಯಾಗದೇ ಉಳಿಕೆಯಾಗಿದ್ದ ಅನುದಾನದಲ್ಲಿ ನೀಡಲಾಗಿತ್ತು.

ಆಗಸ್ಟ್‌ 23ರಿಂದ 2021-22ನೇ ಸಾಲಿನ ಭೌತಿಕ ತರಗತಿಗಳು ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆರಂಭವಾಗಲಿದೆ. ಆದರೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್‌ ದಸರಾ ರಜೆಯ ನಂತರವಷ್ಟೇ ಸಿಗಲಿದೆ. ರಾಜ್ಯದ ಸರ್ಕಾರಿ ಶಾಲೆಯ 1ರಿಂದ 10ನೇ ತರಗತಿಗೆ ಸುಮಾರು 45 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ದಾಖಲಾತಿ ಪಡೆದಿದ್ದಾರೆ.

ಇದರಲ್ಲಿ ಬೆಳಗಾವಿ ವಿಭಾಗದ 14.75 ಲಕ್ಷ, ಬೆಂಗಳೂರು ವಿಭಾಗದ 9 ಲಕ್ಷ, ಕಲಬುರಗಿ ವಿಭಾಗದ 13.15 ಲಕ್ಷ ಹಾಗೂ ಮೈಸೂರು ವಿಭಾಗದ 8.10ಲಕ್ಷ ವಿದ್ಯಾರ್ಥಿಗಳು ಸೇರಿ (ಇನ್ನು ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ) ಸುಮಾರು ಸರ್ಕಾರಿ ಶಾಲೆಯ 45 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸಮವಸ್ತ್ರ, ಶೂ ಹಾಗೂ ಸಾಕ್ಸ್‌ ನೀಡಬೇಕಿದೆ. ಸಮಸವಸ್ತ್ರವನ್ನು ಟೆಂಡರ್‌ ಮೂಲಕ ಅಥವಾ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಮೂಲಕ ಮಕ್ಕಳಿಗೆ ವಿತರಿಸಲಾಗುತ್ತದೆ. ಆದರೆ, ಟೆಂಡರ್‌ ಪ್ರಕ್ರಿಯೆ ಇನ್ನು ಆರಂಭವಾಗದೇ ಇರುವುದರಿಂದ ಕನಿಷ್ಠ 90 ದಿನಗಳು ವಿಳಂಬವಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನೂ ಓದಿ:ಅಫ್ಘಾನ್‌ ವಿದ್ಯಾರ್ಥಿಗಳ ಆತಂಕ ಆಲಿಸಿದ ಪೊಲೀಸ್‌ ಆಯುಕ್ತ: ಸುರಕ್ಷೆಯ ಭರವಸೆ ನೀಡಿದ ಕಮಿಷನರ್‌

Advertisement

ಕೊರೊನಾ ಹಾಗೂ ಆರ್ಥಿಕ ಸಂಕಷ್ಟದಿಂದ ಟೆಂಡರ್‌ ಪ್ರಕ್ರಿಯೆ ಈಗಾಗಲೇ ವಿಳಂಬವಾಗಿದೆ. ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ನಲ್ಲಿ ಮಕ್ಕಳಿಗೆ ಸಮವಸ್ತ್ರ ಸಿಗಲಿದೆ. ಅದು ಕೂಡ ಒಂದೇ ಜತೆ ಸಮವಸ್ತ್ರ ನೀಡುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ.

ಅನುದಾನ ಬಂದಿಲ್ಲ : ಶೂ ಮತ್ತು ಸಾಕ್ಸ್‌ ಖರೀದಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಜಂಟಿ ಖಾತೆಗೆ ಅನುದಾನ ನೀಡಲಾಗುತ್ತದೆ. ಸ್ಥಳೀಯವಾಗಿಯೇ ಉತ್ತಮ ಗುಣಮಟ್ಟದ ಶೂ ಹಾಗೂ ಸಾಕ್ಸ್‌ ಖರೀದಿಗೆ ಅವಕಾಶವಿದೆ. ಆದರೆ, 2021-22ನೇ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಬೇಕಿರುವ ಅನುದಾನ ಇನ್ನು ಬಾರದೇ ಇರುವುದರಿಂದ ಖರೀದಿ ಪ್ರಕ್ರಿಯೆಯೂ ಸ್ವಲ್ಪ ವಿಳಂಬವಾಗಿಯೇ ಶುರುವಾಲಿದೆ ಎಂದು ಎಸ್‌ಡಿಎಂಸಿ ಸದಸ್ಯರೊಬ್ಬರು ವಿವರಿಸಿದರು

ಶೇ.70ರಷ್ಟು ಮುದ್ರಣಕಾರ್ಯ ಪೂರ್ಣ: ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಸಂಬಂಧ ಅಗತ್ಯ ಕ್ರಮ ತೆಗೆದುಕೊಳ್ಳಾಗಿದೆ. ಈಗಾಗಲೇ ಶೇ.70ರಷ್ಟು ಪಠ್ಯಪುಸ್ತಕದ ಮುದ್ರಣಕಾರ್ಯ ಪೂರ್ಣಗೊಂಡಿದೆ. ಉಳಿದ ಶೇ.30ರಷ್ಟು ಪಠ್ಯಪುಸ್ತಕ ಮುದ್ರಣಈ ಮಾಸಾಂತ್ಯದೊಳಗೆ ಮುಗಿಯಲಿದೆ. ಬಹುತೇಕ ಶಾಲೆಗಳಿಗೆಬಿಇಒ ಕಚೇರಿಗಳ ಮೂಲಕ ಹೊಸ ಪಠ್ಯಪುಸ್ತಕ ವಿತರಣೆ ಕಾರ್ಯವೂ ಆರಂಭವಾಗಿದೆ. ಅಲ್ಲದೆ, ಕೆಲವು ಶಾಲೆಗಳು ತಾವಾಗಿಯೇ ಪುಸ್ತಕ ಬ್ಯಾಂಕ್‌ ಸಿದ್ಧಪಡಿಸಿ, ಆ ಮೂಲಕ ಹಳೇ ಪುಸ್ತಕವನ್ನೇ ಮಕ್ಕಳಿಗೆ ನೀಡುವ ಕಾರ್ಯವೂ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬು ಕುಮಾರ್‌ ಮಾಹಿತಿ ನೀಡಿದರು.

ರಾಜುಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next