ಬಡಗನ್ನೂರು ಗ್ರಾಮದ ಅಣಿಲೆ ನಿವಾಸಿ ಪದ್ಮನಾಭ ಆಳ್ವ – ಪ್ರೇಮ ದಂಪತಿ ಪುತ್ರ ಗಗನ್ ಆಳ್ವ (15) ಮೃತ ಬಾಲಕ. ಈತ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರಾಯೋಜಿತ ಈಶ್ವರ ಮಂಗಲ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ.
Advertisement
ಪ್ರತಿನಿತ್ಯ ಶಾಲೆಯ ಬಸ್‌ನಲ್ಲೇ ಹೋಗಿ ಬರುತ್ತಿದ್ದ ಗಗನ್ ಆಳ್ವ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈಶ್ವರಮಂಗಲ -ಪಟ್ಲಡ್ಕ ಸಂಪರ್ಕ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಈಶ್ವರಮಂಗಲದಿಂದ ಪುಳಿತ್ತಡಿ – ಪಟ್ಲಡ್ಕ – ಅಂಬಟೆಮೂಲೆಯಾಗಿ ತೆರಳುತ್ತಿದ್ದ ಶಾಲಾ ಬಸ್‌ನ ಬಾಗಿಲ ಬಳಿ ಗಗನ್ ನಿಂತು ಪ್ರಯಾಣಿಸುತ್ತಿದ್ದ ಎನ್ನಲಾಗಿದೆ.
ಪಟ್ಲಡ್ಕ ತಿರುವಿನಲ್ಲಿ ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡಿದ್ದು, ಗಗನ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವನನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಈಶ್ವರಮಂಗಲದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕೊಂಡೊಯ್ಯಲಾಯಿತು. ತಲೆಯ ಭಾಗಕ್ಕೆ ಬಲವಾಗಿ ಏಟು ಬಿದ್ದ ಕಾರಣ ಗಗನ್ ದಾರಿ ಮಧ್ಯೆ ಮೃತಪಟ್ಟ ಎನ್ನಲಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಶಾಸಕ ಸಂಜೀವ ಮಠಂದೂರು, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿದರು.
ಮೃತ ವಿದ್ಯಾರ್ಥಿ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು, ಮೃತ ಬಾಲಕನ ಮನೆಯವರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
Related Articles
ಇತ್ತೀಚೆಗಷ್ಟೇ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖಾ ವ್ಯಾಪ್ತಿಯ ಉಪಸಮಿತಿಗಳ ಸಭೆಯೊಂದನ್ನು ಕರೆಯಲಾಗಿತ್ತು. ಇದರಲ್ಲಿ ಖಾಸಗಿ ಶಾಲಾ ಬಸ್‌ಗಳು ನಿಯಮ ಉಲ್ಲಂಘನೆ ಮಾಡುತ್ತಿವೆ ಎಂಬ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು. ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯವೂ ಕೇಳಿಬಂದಿತ್ತು. ವಿದ್ಯಾರ್ಥಿಗಳಿಗೆ ಅಪಾಯ ಆಗುವ ಶಾಲಾ ವಾಹನಗಳನ್ನು ತತ್‌ಕ್ಷಣ ಸರಿ ಪಡಿಸುವಂತೆ ಸಭೆಯಲ್ಲಿ ಎಚ್ಚರಿಕೆ ನೀಡಿದ್ದ ಅಧಿಕಾರಿಗಳು, ವಾರದೊಳಗೆ ಸಂಬಂಧಪಟ್ಟ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಈಗ ದುರಂತ ಘಟಿಸಿದೆ. ಸ್ಥಳೀಯರು ಬಸ್‌ನ ಗುಣಮಟ್ಟದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರಿಂದ ಸಾರಿಗೆ ಇಲಾಖೆ ಈ ಬಗ್ಗೆ ಪರಿಶೀಲಿಸುವ ಸಾಧ್ಯತೆಯಿದೆ.
Advertisement
ಸುಪ್ರೀಂ ಕೋರ್ಟ್‌ನ ಆದೇಶದಂತೆ ಪ್ರತಿ ಶಾಲಾ – ಕಾಲೇಜುಗಳ ಬಸ್‌ಗಳು 18 ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ಇದರ ಬಗ್ಗೆ ಹಿಂದಿನ ವರ್ಷವೇ ತಾಲೂಕಿನ ಎಲ್ಲ ಶಾಲಾ – ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ ಎಂದು ಶಾಲಾ – ಕಾಲೇಜುಗಳು ಲಿಖೀತವಾಗಿ ತಿಳಿಸಿವೆ. ಆದರೂ ಈ ಘಟನೆ ಹೇಗೆ ನಡೆಯಿತು ಎಂದೇ ತಿಳಿಯುತ್ತಿಲ್ಲ. ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು. ವಾಹನದ ಗುಣಮಟ್ಟದ ಬಗ್ಗೆ ಸಾರಿಗೆ ಇಲಾಖೆ ಪರಿಶೀಲನೆ ನಡೆಸಬೇಕಿದೆ.–ವೈ. ಶಿವರಾಮಯ್ಯ, ಡಿಡಿಪಿಐ, ದ.ಕ.