Advertisement
ಕೇರಳ ಹಾಗೂ ಮುಂಬಯಿ ಗಡಿಯೊಂದಿಗಿನ ನಂಟು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಹಾಗೂ ಸಂಭಾವ್ಯ ಮೂರನೇ ಅಲೆಯ ತಡೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ.
Related Articles
Advertisement
ಕಾರ್ಕಳ, ಹೆಬ್ರಿ, ನಿಟ್ಟೆ, ಬೈಂದೂರು, ಕೊಲ್ಲೂರು, ಕುಂದಾಪುರ, ಮಣಿಪಾಲ ಹಾಗೂ ಉಡುಪಿಯಲ್ಲಿ ಸಿಸಿಸಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆದು ಕುಟುಂಬದ ಸದಸ್ಯರಿಗೆ ಸೋಂಕು ತಗಲದಂತೆ ಕೋವಿಡ್ ಕೇಂದ್ರಗಳಿಗೆ ಬಂದು ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.
ಕೋವಿಡ್ ಪರೀಕ್ಷೆ ಹೆಚ್ಚಳ:
ಕೋವಿಡ್ ಪರೀಕ್ಷೆ ಪ್ರಮಾಣವನ್ನು 3,000ದಿಂದ 6,000ಕ್ಕೆ ಹೆಚ್ಚಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕನಿಷ್ಠ 20 ಮಂದಿಯನ್ನು ಪತ್ತೆ ಹಚ್ಚಿ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಯನ್ನು 10 ಸಾವಿರಕ್ಕೆ ಹೆಚ್ಚಿಸುವ ಗುರಿಯಿದೆ. ಸೋಂಕಿತರು ಕಾರ್ಯ ನಿರ್ವಹಿಸುವ ಕಡೆಯೂ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.
ಆರ್‌ಟಿಪಿಸಿಆರ್ ಕಡ್ಡಾಯ :
ನೆರೆಯ ಕೇರಳದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಿಂದ ಉಡುಪಿಗೆ ರೈಲಿನಲ್ಲಿ ಬರುವವರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿ ತರಲು ಸೂಚನೆ ನೀಡಲಾಗಿದೆ. ಅವರ ವರದಿ ತಪಾಸಣೆಗೆ ರೈಲು ನಿಲ್ದಾಣಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮೈಕ್ರೋ ಕಂಟೈನ್ಮೆಂಟ್ ವಲಯ:
ಸಮುದಾಯಕ್ಕೆ ಸೋಂಕು ಹರಡುವುದನ್ನು ತಡೆಯಲು ಮೈಕ್ರೋ ಕಂಟೈನ್ಮೆಂಟ್ ವಲಯಗಳ ರಚನೆ ಪರಿಣಾಮಕಾರಿ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು ಮಾಡಲು ನಿರ್ಧರಿಸಲಾಗಿದೆ. ಸೋಂಕಿತರು ವಾಸವಾಗಿರುವ ಮನೆ ಹಾಗೂ ಸುತ್ತಮುತ್ತಲಿನ ನಾಲ್ಕು ಮನೆಗಳನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಿ, ಅಲ್ಲಿರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡುವ ಮೂಲಕ ಸೋಂಕು ಪತ್ತೆಹಚ್ಚಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಮಕ್ಕಳ ರಕ್ಷಣೆ :
ಸಂಭಾವ್ಯ ಕೋವಿಡ್ 3ನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ಆರೋಗ್ಯ ಇಲಾಖೆ ವಾತ್ಸಲ್ಯ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಮಕ್ಕಳ ಆರೋಗ್ಯ ಶಿಬಿರಗಳನ್ನು ನಡೆಸಿದ್ದು, ಈಗಾಗಲೇ 1.75 ಲಕ್ಷ ಮಕ್ಕಳನ್ನು ತಪಾಸಣೆಗೊಳಪಡಿಸಿದೆ. ತಪಾಸಣೆ ವೇಳೆ ಪೌಷ್ಟಿಕ ಆಹಾರ ಕೊರತೆ ಕಂಡುಬಂದಿರುವ ಮಕ್ಕಳಿಗೆ ವಿವಿಧ ಇಲಾಖೆಯಗಳ ನೆರವಿನಿಂದ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ.
ಕೇರಳ, ಮುಂಬಯಿ ಆತಂಕ :
ಉಡುಪಿ ಜಿಲ್ಲೆಯು ಕೇರಳ ಹಾಗೂ ಮುಂಬಯಿನೊಂದಿಗೆ ಹೆಚ್ಚು ಸಂಪರ್ಕ ಹೊಂದಿದೆ. ಈಗಾಗಲೇ ಹೆಚ್ಚಿನ ಮಂದಿ ಆ ಭಾಗದಿಂದ ಬಂದು ಇಲ್ಲಿ ನೆಲೆಸಲಾರಂಭಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಕೋವಿಡ್ ಪಾಸಿಟಿವಿಟಿ ದರ ಶೇ. 2.50ಕ್ಕಿಂತ ಹೆಚ್ಚಾಗಿರುವುದು ಅಪಾಯದ ಎಚ್ಚರಿಕೆಯ ಗಂಟೆ ಎನ್ನುತ್ತಾರೆ ತಜ್ಞರು. ಜತೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೆರೆಯ ಐದಾರು ಜಿಲ್ಲೆಗಳಿಂದ ರೋಗಿಗಳು ಬರು ವುದರಿಂದ ಸೋಂಕು ಪಸರಿಸುವ ಭೀತಿಯೂ ಇದೆ.
ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ 2 ತಿಂಗಳಿಂದ ಕೊರೊನಾ ಪಾಸಿಟಿವಿಟಿ ದರ ಶೇ. 2.5ನಿಂದ ಶೇ. 3 ದಷ್ಟಿದೆ. ಈ ತಿಂಗಳಾಂತ್ಯಕ್ಕೆ ಇದನ್ನು ಶೇ.2 ಗಿಂತ ಕಡಿಮೆಗೆ ತರಲು ಪ್ರಯತ್ನಿಸಲಾಗುತ್ತಿದೆ. ಅನಂತರ ಶಾಲಾರಂಭದ ಬಗ್ಗೆ ಸರಕಾರಕ್ಕೆ ಮನವಿ ಮಾಡುವ ಅವಕಾಶ ಸಿಗಲಿದೆ. ಮಾಸ್ಕ್ ಧರಿಸದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಕಠಿನ ಕ್ರಮ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ನಿರ್ವಹಿಸಿದರಷ್ಟೇ ಶಾಲಾರಂಭ ಮಾಡಲು ಸಾಧ್ಯವಿದೆ. ಈಗಾಗಲೇ ಕೋವಿಡ್ ಪರೀಕ್ಷೆಯನ್ನು 3 ಸಾವಿರದಿಂದ 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮುಂದೆ 10 ಸಾವಿರದಷ್ಟು ಪರೀಕ್ಷೆ ನಡೆಸಲಾಗುವುದು. ಒಂದು ವಾರದಿಂದ ಜಿಲ್ಲೆಗೆ 8 ಸಾವಿರದಿಂದ 10 ಸಾವಿರದಷ್ಟು ಲಸಿಕೆ ಬರುತ್ತಿದೆ. ಪರೀಕ್ಷೆ ಹೆಚ್ಚಳಕ್ಕೆ ಅನುಕೂಲವಾಗುವಂತೆ ಸ್ವಾಬ್ ಕಲೆಕ್ಟರ್‌ಗಳು, ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ.–ಜಿ.ಜಗದೀಶ್, ಜಿಲ್ಲಾಧಿಕಾರಿ.
– ಪುನೀತ್ ಸಾಲ್ಯಾನ್