ನವಲಗುಂದ: ಭಾರೀ ಮಳೆಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಸ್ವಗ್ರಾಮದಲ್ಲೇ ಶಾಲೆಗೆ ನೀರು ನುಗ್ಗಿ ನೂರಾರು ಮಕ್ಕಳು, ಶಿಕ್ಷಕರು ಜಲದಿಗ್ಬಂಧನಕ್ಕೆ ಒಳಗಾದ ಘಟನೆ ನಡೆದಿದೆ.
ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ತಾಲೂಕಿನ ಅಮರಗೋಳ ಗ್ರಾಮದ ಹೊರ ವಲಯದಲ್ಲಿರುವ ಅಡವೆಪ್ಪಗೌಡ ಸಿದ್ದನಗೌಡ ಪಾಟೀಲ ಸರ್ಕಾರಿ ಪ್ರೌಢಶಾಲೆ ಜಲಾವೃತಗೊಂಡಿದ್ದು, 150ಕ್ಕೂ ಹೆಚ್ಚು ಮಕ್ಕಳು ಹಾಗೂ 6 ಜನ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದರು. ಹಳ್ಳ ತುಂಬಿ ಹರಿದ ಪರಿಣಾಮ ಶಾಲೆಗೆ ನೀರು ನುಗ್ಗಿದ್ದರಿಂದ 1ರಿಂದ 10ನೇ ತರಗತಿವರೆಗೆ ಓದುತ್ತಿದ್ದ ನೂರಾರು ಮಕ್ಕಳು ಮತ್ತು ಶಿಕ್ಷಕರು ಅತಂತ್ರರಾಗಿದ್ದರು.
ಇನ್ನೇನು ಶಾಲೆ ಬಿಡುವ ಸಮಯದಲ್ಲೇ ಭಾರೀ ಮಳೆಯಾಯಿತು. ಮಳೆ ನಿಂತ ಮೇಲೆ ಗ್ರಾಮಕ್ಕೆ ತೆರಳಬೇಕೆನ್ನುವಷ್ಟರಲ್ಲಿ ಶಾಲೆ ತಗ್ಗು ಪ್ರದೇಶದಲ್ಲಿರುವುದರಿಂದ ಹಳ್ಳದ ನೀರು ಶಾಲೆಯನ್ನು ಸುತ್ತುವರಿಯಿತು. ಇದರಿಂದ ಸುಮಾರು 4 ತಾಸು ಶಾಲೆಯಲ್ಲೇ ಮಕ್ಕಳು ಹಾಗೂ ಶಿಕ್ಷಕರು ಭಯದಿಂದಲೇ ಕಾಲ ಕಳೆದರು. ನಂತರ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಿ ಟ್ರ್ಯಾಕ್ಟರ್ ಟ್ರೈಲರ್ ಸಹಾಯದಿಂದ ಮಕ್ಕಳನ್ನು ಸುರಕ್ಷಿತವಾಗಿ ಗ್ರಾಮಕ್ಕೆ ಕರೆತಂದರು. ರಾತ್ರಿ 8 ಗಂಟೆವರೆಗೂ ರಕ್ಷಣಾ ಕಾರ್ಯ ನಡೆಯಿತು.
ಸುರಕ್ಷಿತವಾಗಿ ಬಂದ ಮಕ್ಕಳು ಹಾಗೂ ಪಾಲಕರಿಗೆ ಗ್ರಾಪಂ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಿ ಮಕ್ಕಳಿಗೆ ಧೈರ್ಯ ಹೇಳಿದರು. ಸ್ಥಳಕ್ಕೆ ಸಿಪಿಐ ಸಿ.ಜಿ.ಮಠಪತಿ ಆಗಮಿಸಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಮರಗೋಳ ಗ್ರಾಮವು ಸ್ಥಳೀಯ ಶಾಸಕ ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಗ್ರಾಮ. ಹಳ್ಳದ ನೀರಿನಿಂದ ಎರಡನೇ ಬಾರಿ ನೀರು ಶಾಲಾ ಆವರಣದ ಸುತ್ತಲು ಬರುತ್ತಿದೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಇನ್ನಾದರೂ ಮುತುವರ್ಜಿ ವಹಿಸಿ ಹಳ್ಳದ ನೀರು ಶಾಲೆ ಆವರಣದ ಕಡೆಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರಾಮಸ್ಥರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.