Advertisement

ಸಂಭ್ರಮದಿಂದ ಆಗಮಿಸಿದ ಮಕ್ಕಳು :  ಸ್ಯಾನಿಟೈಸರ್, ಗುಲಾಬಿ ಹೂ ನೀಡಿ ಸ್ವಾಗತಿಸಿದ ಶಿಕ್ಷಕರು

12:21 PM Aug 24, 2021 | Team Udayavani |

ಹುಣಸೂರು :  ಕೊವಿಡ್-19 ನಡುವೆಯೇ ಸರಕಾರ 9-12 ನೇ ತರಗತಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ತಾಲೂಕಿನಾದ್ಯಂತ 76 ಫ್ರೌಢಶಾಲೆಗಳು, ಹಾಗೂ ಪಿಯು ಕಾಲೇಜುಗಳು ಆರಂಭವಾಗಿದ್ದು, ಶೇ. 50ರಷ್ಟು ವಿದ್ಯಾರ್ಥಿಗಳು ಮಾತ್ರ ಭೌತಿಕ ತಗರತಿಗೆ ಹಾಜರಾಗಿದ್ದಾರೆ.

Advertisement

ಶಾಲಾ-ಕಾಲೇಜು ಆರಂಭವಾಗಿದ್ದರಿಂದ ವಿದ್ಯಾರ್ಥಿಗಳು ಸಂತಸ-ಸಂಭ್ರಮದಿಂದಲೇ ಶಾಲಾ-ಕಾಲೇಜಿನ ಕಡೆಗೆ ಹೆಜ್ಜೆ ಹಾಕಿದರು. ಬಣಗುಡುತ್ತಿದ್ದ ಶಾಲಾ-ಕಾಲೇಜುಗಳಲ್ಲಿ ಬಣ್ಣಬಣ್ಣದ ಉಡುಗೆಯಲ್ಲಿ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದುದು ಕಂಡು ಬಂತು.

ಸುಮಾರು ಒಂದೂವರೆ ವರ್ಷಗಳಿಂದ ತರಗತಿಗಳು ನಡೆಯದೆ ಆವರಣ ಹಾಗೂ ಶಾಲಾ-ಕಾಲೇಜುಗಳ ಸುತ್ತ ಬೆಳೆದಿದ್ದ ಗಿಡಗುಂಟೆಗಳನ್ನು ಕಳೆದ ಎರಡು ದಿನಗಳಿಂದ ಆವರಣದ ಸುತ್ತ ಸ್ವಚ್ಚತೆ, ಸ್ಯಾನಿಟೈಸರ್ ಗೊಳಿಸಲಾಗಿತ್ತು.

ಆನ್ ಲೈನ್ ಮೂಲಕವೇ ಪಾಠ ಕೇಳಿ ಬೇಸತ್ತಿದ್ದ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಲಗುಬಗೆಯಿಂದಲೇ ಆಗಮಿಸಿ ಮೊದಲ ದಿನವೇ ಸ್ನೇಹಿತರನ್ನು ಕಾಣುತ್ತಲೇ ಸಂತಸದಿಂದಲೇ ಹಿಗ್ಗಿದರು. ಶಿಕ್ಷಕರು-ಉಪನ್ಯಾಸಕರನ್ನು ಕಂಡು ಗುರು ವಂದನೆ ಸಲ್ಲಿಸಿದರು. ಶಾಲಾ-ಕಾಲೇಜುಗಳಿಗೆ ಆಗಮಿಸಿದ  ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ, ದೇಹದ ತಾಪಮಾನ ಪರೀಕ್ಷಿಸಿ, ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಮೊದಲ ದಿನವೇ ಗುರುಗಳು ತರಗತಿಗಳಲ್ಲಿ ಕೊರೊನಾ ಬಗೆಗಿನ ಎಚ್ಚರಿಕೆಯ ಪಾಠ ಮಾಡಿದರು. ಕೊರೊನಾದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಯಾವಾಗಲೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಬಿಸಿನೀರನ್ನೇ ಕುಡಿಯಬೇಕು. ಅನಗತ್ಯ ಓಡಾಟ ಮಾಡಬಾರದು. ಮದುವೆ ಮತ್ತಿತರ ಸಮಾರಂಭಗಳಲ್ಲಿ ಭಾಗವಹಿಸದಂತೆ ಸಲಹೆ ನೀಡಿದರು. ನಂತರ ಪರಸ್ಪರ ಪರಿಚಯ ಮಾಡಿಸಿ, ಪಾಠದ ಕಡೆ ಗಮನ ಹರಿಸಿದರು.

Advertisement

ಹುಣಸೂರಿನ ಬಾಲಕಿಯರ ಪದವಿ ಪೂರ್ವ ಕಾಲೇಜು, ಫ್ರೌಢ ಶಾಲೆಗಳು ಸೇರಿದಂತೆ ತಾಲೂಕಿನ ಎಲ್ಲೆಡೆ ಸರಕಾರದ ಮಾರ್ಗಸೂಚಿಗಳನ್ನು ತಿಳಿಸಿ, ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು. ಪಿಯು ಕಾಲೇಜುಗಳಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಜೊತೆಗೆ ಪ್ರಥಮ ಪಿಯುಗೆ ಸೇರುವ ವಿದ್ಯಾರ್ಥಿಗಳ ದಂಡು ಎಲ್ಲೆಡೆ ಕಂಡುಬಂತು.

ಕೊರೊನಾ ಹೆಚ್ಚುತ್ತಿರುವ ಹುಣಸೂರು ತಾಲೂಕಿನಲ್ಲಿ ಶಿಕ್ಷಕರು-ಅಧಿಕಾರಿಗಳು ಮಾರ್ಗಸೂಚಿ ಅನುಸರಿಸಲು ಹೇಳುತ್ತಾರಾದರೂ ಕೊರೊನಾ ಬಗ್ಗೆ ಮಕ್ಕಳೇ ಎಚ್ಚರ ವಹಿಸಬೇಕು ಎಚ್ಚರ ತಪ್ಪಿದಲ್ಲಿ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ.

ಬಣಗುಡುತ್ತಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆಗಮನದಿಂದ ನಾವು ಪುಳಕಿತರಾಗಿದ್ದೇವೆ. ಕೊರೊನಾ ಎಸ್‌ಓಪಿ ಪಾಲಿಸಿಕೊಂಡೇ ಪಾಠ-ಪ್ರವಚನ ನಡೆಸಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಬಾಲಕಿಯರ ಪಿಯು ಕಾಲೇಜಿನ ಪ್ರಚಾರ್ಯ ರಾಮೇಗೌಡ.

ಬಿ.ಇ.ಓ.ಭೇಟಿ : ನಗರ ಸೇರಿದಂತೆ ತಾಲೂಕಿನ ಬಹುತೇಕ ಶಾಲೆಗಳಿಗೆ ಬಿಇಓ ನಾಗರಾಜ್, ಬಿ.ಆರ್.ಸಿ. ಸಂತೋಷ್‌ಕುಮಾರ್ ಸೇರಿದಂತೆ ಬಿ.ಆರ್.ಪಿ ಹಾಗೂ ಸಿ.ಆರ್.ಪಿ.ಗಳು ಭೇಟಿ ನೀಡಿ ಮಾರ್ಗಸೂಚಿ ಅನುಸರಿಸಿರುವ ಬಗ್ಗೆ ಪರಿಶೀಲನೆ ನಡೆಸಿ, ಹಲವಾರು ಸೂಚನೆಗಳನ್ನು ನೀಡಿದರು.

ಫ್ರೌಢಶಾಲಾ ವಿಭಾಗದಲ್ಲಿ ಪ್ರಥಮ ದಿನ 8,336 ವಿದ್ಯಾರ್ಥಿಗಳ ಪೈಕಿ 4,066 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದರೆಂದು ಬಿಆರ್‌ ಸಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಕಾಲೇಜುಗಳು ಆರಂಭಗೊಳ್ಳದೆ ಆನ್‌ಲೈನ್ ಮೂಲಕ ನೀಡುತ್ತಿದ್ದ ಪಾಠವನ್ನು ಸರ್ವರ್ ಮತ್ತಿತರ ಪ್ರಾಬ್ಲಮ್‌ನಿಂದ ಕೇಳಲಾಗದೆ, ಮತ್ತೊಂದೆಡೆ ಆನ್ ಲೈನ್ ಪಾಠ ಆರಂಭದ ವೇಳೆಯೇ ಪೋಷಕರು ಕೆಲಸಕ್ಕೆ ಹೋದ ಸಂದರ್ಭಗಳಲ್ಲಿ ವಂಚಿತಾಗುತ್ತಿದ್ದೆವು.

ಇನ್ನು ಆಟ-ಪಾಠವಿಲ್ಲದೆ ಬೇಸರವಾಗಿತ್ತು. ಇದೀಗ ಕೊರೊನಾದ ಆತಂಕದ ನಡುವೆ ತರಗತಿಗಳು ಆರಂಭವಾಗಿರುವುದು ಸಂತಸ ತಂದಿದೆ. ಮನೆ ಮಾಡಿದೆ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಅತ್ಯಗತ್ಯವಾಗಿದ್ದು, ಕಲ್ಪಿಸುವಂತೆ ಮನವಿ ಮಾಡುವೆ.

ಕೌಶಿಕ್, ಫ್ರೌಢಶಾಲೆ ವಿದ್ಯಾರ್ಥಿ. ಕಟ್ಟೆಮಳಲವಾಡಿ.

ಎಸ್.ಎಸ್.ಎಲ್.ಸಿ.ಯು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ, ತರಗತಿಯಲ್ಲಿ ಪಾಠ ಕೇಳಿ ಅಭ್ಯಾಸವಾಗಿದ್ದ ನಮಗೆ ಮೊಬೈಲ್ ಮೂಲಕ ಪಾಠ ಕೇಳುವುದು ಸಮಸ್ಯೆಯಾಗಿತ್ತು, ಇದೀಗ ತರಗತಿಗಳು ಭೌತಿಕವಾಗಿ ಆರಂಭವಾಗಿರುವುದು ಸಂತಸ ಮನೆಮಾಡಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಪಾಠ ಕೇಳುವ ಗಟ್ಟಿ ನಿರ್ಧಾರ ಮಾಡಿದ್ದೇನೆ.

ಕವನ, ಬಾಲಕಿಯರ ಪಿಯು ಕಾಲೇಜು ಹುಣಸೂರು.

Advertisement

Udayavani is now on Telegram. Click here to join our channel and stay updated with the latest news.

Next