ಬೆಂಗಳೂರು: ರಾಜ್ಯದಲ್ಲಿ ಸೋಮವಾರ 6ರಿಂದ 8ನೇ ತರಗತಿಗಳು ಆರಂಭವಾಗಿದ್ದರೂ ಕೇರಳ ಮತ್ತು ಮಹಾರಾಷ್ಟ್ರದ ಗಡಿಭಾಗದ ಶಾಲೆಗಳಲ್ಲಿ ಗೊಂದಲ ಮಾತ್ರ ಬಗೆಹರಿದಿಲ್ಲ.
6ರಿಂದ 8ನೇ ತರಗತಿಗಳಿಗೆ ಮೊದಲ ದಿನ 13,59,761 ವಿದ್ಯಾರ್ಥಿಗಳು ಹಾಜರಾಗಿದ್ದು, ಅದು ಶೇ. 42.91ರಷ್ಟಾಗಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿದ್ಯಾಗಮ ವಿದ್ಯಾರ್ಥಿಗಳು, ಕೇರಳದ ಗಡಿಭಾಗದ ಶಾಲೆಯ ವಿದ್ಯಾಗಮ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಮಾಡಿದ್ದರಿಂದ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಕರ್ನಾಟಕದ ಗಡಿ ಭಾಗದ ಶಾಲೆಗಳಿಗೆ ಬರಲು ಸಾಧ್ಯವಾಗಿಲ್ಲ. ಕೇರಳದ ಗಡಿ ಭಾಗದ ಬಹುತೇಕ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಹಾಗೂ ಕೊರೊನಾ ಪರೀಕ್ಷೆಗೆ ನೂಕುನೂಗ್ಗಲು ಇದ್ದಿದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಕೇರಳ ಗಡಿ ಭಾಗದ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು.
ಹಾಜರಾತಿ ವಿವರ
ದಕ್ಷಿಣ ಕನ್ನಡದಲ್ಲಿ ಮೊದಲ ದಿನ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ.68.24ರಷ್ಟಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿತ್ತು. 6ರಿಂದ 8ನೇ ತರಗತಿಗೆ ಈ ಜಿಲ್ಲೆಯಲ್ಲಿ 97,223 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 66,341 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಡುಪಿಯಲ್ಲಿ ಈ ಮೂರು ತರಗತಿಗೆ 48,776 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 26,615 ವಿದ್ಯಾರ್ಥಿ ಗಳು ಹಾಜರಾಗಿ ಶೇ.54.58ರಷ್ಟು ಹಾಜರಾತಿ ದಾಖಲಾಗಿದೆ.
ಬಳ್ಳಾರಿಯಲ್ಲಿ ಶೇ.56.66, ಬಾಗಲಕೋಟೆಯಲ್ಲಿ ಶೇ.52.12, ಕೊಪ್ಪಳದಲ್ಲಿ ಶೇ.58.56, ಮಧುಗಿರಿಯಲ್ಲಿ ಶೇ.52.37, ಶಿರಸಿಯಲ್ಲಿ ಶೇ.56.57ರಷ್ಟು ಹಾಜರಾತಿ ದಾಖಲಾಗಿದೆ. ವಿಜಯಪುರದಲ್ಲಿ ಶೇ.22.21ರಷ್ಟು ಹಾಜ ರಾತಿ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ ಕಡಿಮೆಯಾಗಿದೆ. ಹಾವೇರಿಯಲ್ಲಿ ಶೇ.29.96ರಷ್ಟು ಹಾಜರಾತಿ ದಾಖಲಾಗಿದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯಲ್ಲಿ 8ನೇ ತರಗತಿಗೆ 79,314 ವಿದ್ಯಾರ್ಥಿಗಳು ಹಾಜರಾಗಿದ್ದಾರೆ .