Advertisement

ರಾಜಕೀಯ ತರಬೇತಿಗಾಗಿ ಸ್ಕೂಲ್‌ ಆಫ್ ಗವರ್ನೆನ್ಸ್‌: ಯು.ಟಿ. ಖಾದರ್‌

01:02 AM Mar 06, 2024 | Team Udayavani |

ಬೆಂಗಳೂರು: ರಾಜಕೀಯ ತರಬೇತಿಗಾಗಿ ರಾಜ್ಯದಲ್ಲಿ ಸ್ಕೂಲ್‌ ಆಫ್ ಗವರ್ನೆನ್ಸ್‌ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

Advertisement

ಕಾನೂನು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆಯು ಮಂಗಳವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ-2024ರ ಸಮಾರೋಪದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ, ಎಂಜಿನಿಯರಿಂಗ್‌, ಕಾನೂನು ಸೇರಿದಂತೆ ಎಲ್ಲ ವಿಷಯಗಳಿಗೂ ಕಾಲೇಜು, ವಿಶ್ವವಿದ್ಯಾನಿಲಯಗಳು ಇವೆ. ಆದರೆ, ಉತ್ತಮ ರಾಜಕಾರಣಿಗಳಾಗಬೇಕು ಎಂಬ ಆಸಕ್ತಿ ಇಟ್ಟುಕೊಂಡವರಿಗೆ ಪ್ರತ್ಯೇಕ ಶಿಕ್ಷಣದ ವ್ಯವಸ್ಥೆ ಇಲ್ಲ. ಹೀಗಾಗಿ ರಾಜಕೀಯ ತರಬೇತಿ ನೀಡಲು ಸ್ಕೂಲ್‌ ಆಫ್ ಗವರ್ನೆನ್ಸ್‌ ಆರಂಭಿಸಬೇಕು ಎಂದು ವಿಧಾನಮಂಡಲದ ಉಭಯ ಸದನಗಳ ಮುಖ್ಯಸ್ಥರೂ ಚಿಂತನೆ ನಡೆಸಿದ್ದೇವೆ ಎಂದರು.

ಮತದಾರ ಎಚ್ಚೆತ್ತು ಮೌಲ್ಯಾಧಾರಿತ ಮತ ಹಾಕಬೇಕುಶಿಕ್ಷಣ ಪಡೆದವರು, ಪುರುಷರು, ತೆರಿಗೆ ಕಟ್ಟುವ ಶ್ರೀಮಂತರು ಮಾತ್ರವಲ್ಲದೆ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಅವಕಾಶವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಕನಿಷ್ಠ 5 ವರ್ಷಕ್ಕೊಮ್ಮೆ ಆದರೂ ಮತದಾರನ ಕಾಲಬುಡಕ್ಕೆ ಜನಪ್ರತಿನಿಧಿ ಹೋಗುವಂತಾಗಬೇಕು ಎಂದು ಚುನಾವಣೆ ವ್ಯವಸ್ಥೆ ಮಾಡಿದ್ದಾರೆ. ಶೇ. 90ರಷ್ಟು ಬಡವರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಾರೆ. ಆದರೆ, ಸೂಟು-ಬೂಟು ತೊಟ್ಟ ವಿದ್ಯಾವಂತರೇ ಮತ ಹಾಕುವುದಿಲ್ಲ. ಸರ್ವರಿಗೂ ಮತದಾನ ಅರಿವಾಗಬೇಕು. ಮತದಾರರು ಎಚ್ಚೆತ್ತು ಮೌಲ್ಯಾಧಾರಿತ ಮತ ಹಾಕಿದಾಗ ಮಾತ್ರ, ಇರುವ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಸ್ಪೀಕರ್‌ ಖಾದರ್‌ ಕರೆ ನೀಡಿದರು.

ನೆಮ್ಮದಿ ಇಲ್ಲ: ಹೊರಟ್ಟಿ
ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾಗಿ ನೆಮ್ಮದಿ ಇದೆಯೇ? ಎಂದು ಪ್ರಶ್ನಿಸಿಕೊಂಡರೆ ಪ್ರಾಮಾಣಿಕವಾಗಿ ನನಗಂತೂ ನೆಮ್ಮದಿ ಇಲ್ಲ. ಎಲ್ಲಿಯವರೆಗೆ ದುಡ್ಡು ತೆಗೆದುಕೊಂಡು ಮತ ಹಾಕುತ್ತಾರೋ ಅಲ್ಲಿಯವರೆಗೆ ವ್ಯವಸ್ಥೆ ಹೀಗೆಯೇ ಇರುತ್ತದೆ. ನಾನ್ಯಾಕೆ ಪ್ರಾಮಾಣಿಕವಾಗಿ ಇರಬೇಕೆಂದು ನಮಗೂ ಅನ್ನಿಸುತ್ತದೆ. ಪ್ರಾಮಾಣಿಕ ರಾಜಕಾರಣ ಬರಬೇಕು. ಸುಧಾರಣೆ ಆಗಬೇಕು. ದುಡ್ಡು ಕೊಟ್ಟು ಆಯ್ಕೆ ಆಗಿ ಬಂದವರಿಗೆ ರಾಜ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಎಲ್ಲ ಕ್ಷೇತ್ರದಂತೆ ರಾಜಕಾರಣದಲ್ಲೂ ಕುಸಿದಿರುವ ಮೌಲ್ಯವನ್ನು ಮೇಲೆತ್ತುವ ಕೆಲಸ ಆಗಬೇಕು. ಮಾನಸಿಕವಾಗಿ ನೆಮ್ಮದಿಯಾಗಿದ್ದಾಗ ಮಾತ್ರ ಪ್ರಾಮಾಣಿಕ ಕೆಲಸ ಸಾಧ್ಯ ಎಂದು ಪ್ರತಿಪಾದಿಸಿದರು.

Advertisement

ಶಾಲೆಯಲ್ಲಿ ಮಕ್ಕಳ ಅಟೆಂಡೆನ್ಸ್‌ ಪಡೆಯುವುದು ಸುಲಭ. ನಮ್ಮಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಅದಕ್ಕಾಗಿ ಬೆಳಗಿನ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಕಾರ್ಯದರ್ಶಿ ಅವರಿಗೆ ಆಗಾಗ ತಮಾಷೆ ಮಾಡುತ್ತಿರುತ್ತೇನೆ, ಮಧ್ಯಾಹ್ನ ಊಟದ ಅನಂತರ ಕೋರಂಗೆ ಅಗತ್ಯವಿರುವ 20 ಹಾಸಿಗೆಯನ್ನೂ ಹಾಕಿಸಿಬಿಡೋಣ, ಒಂದರ್ಧ ಗಂಟೆ ನಿದ್ರೆ ಮಾಡಿಯೇ ಬರಲಿ. ಶಾಸಕರು ಕೇವಲ ಕ್ಷೇತ್ರದ ಪ್ರತಿನಿಧಿ ಮಾತ್ರವಲ್ಲ ರಾಜ್ಯಕ್ಕೆ ಸಂಬಂಧಿಸಿದ ಶಾಸನ ರಚಿಸುವ ರಾಜ್ಯದ ಪ್ರತಿನಿಧಿಗಳು ಎಂಬುದನ್ನು ಮರೆಯಬಾರದು.
– ಯು.ಟಿ. ಖಾದರ್‌, ವಿಧಾನಸಭಾಧ್ಯಕ್ಷ

ನಮ್ಮಪ್ಪ ನನ್ನನ್ನು ಡಾಕ್ಟರ್‌ ಮಾಡಬೇಕೆಂದು ಸೈನ್ಸ್‌ಗೆ ಹಾಕಿದ್ದರು. ಗಣಿತ ವಿಷಯದಲ್ಲಿ 25 ಅಂಕ ತೆಗೆದೆ ಎಂದು ಆರ್ಟ್ಸ್ಗೆ ಹಾಕಿದರು. ಅನಂತರ ಎಲ್‌ಎಲ್‌ಬಿ ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಹೋದೆ. ರಾಜಕಾರಣಕ್ಕೆ ಬಂದೆ. ಎಲ್‌ಎಲ್‌ಬಿ ಮಾಡದೆಯೇ ಕಾನೂನು ಮಂತ್ರಿ ಆದೆ. ರಾಜಕಾರಣಕ್ಕೆ ಇಂತಹವರೇ ಬರಬೇಕೆಂದೇನೂ ಇಲ್ಲ. ಆದರೆ, ಸರಿಯಾದ ತರಬೇತಿ ಬೇಕು. ಅದನ್ನು ಕೊಡುವ ಕೆಲಸ ಮಾಡುತ್ತೇವೆ. ಸಭಾಧ್ಯಕ್ಷ, ಸಭಾಪತಿ ಆಗಲು ಹಿಂಜರಿ ಯುವವರೇ ಹೆಚ್ಚು. ಇದೊಂದು ಗೌರವದ ಸ್ಥಾನ.
– ಬಸವರಾಜ ಹೊರಟ್ಟಿ,
ವಿಧಾನಪರಿಷತ್‌ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next