Advertisement
ಭಾರದ ಬ್ಯಾಗ್ ಬೆನ್ನಿಗೇರಿಸಿಕೊಂಡು, ಹಠಮಾಡಿ ತೆಗೆಸಿಕೊಂಡ ನೀರಿನ ಬಾಟಲಿ ಹಿಡಿದು ಗೆಳೆಯರೊಂದಿಗೆ ಶಾಲೆಗೆ ಹೋಗುವುದೇ ಖುಷಿ.
Related Articles
Advertisement
ನೃತ್ಯದ ತಯಾರಿ ಒಂದು ವಾರ ಮುಂಚಿತವಾಗಿಯೇ ಪ್ರಾರಂಭವಾಗುತ್ತಿತ್ತು. ಆವಾಗ ತರಗತಿ ಬಿಟ್ಟು ಅಭ್ಯಾಸಕ್ಕೆ ಹೋಗುವುದು ಒಂಥರಾ ಖುಷಿ!
ಸ್ವಾತಂತ್ರ್ಯ ದಿನದ ತಯಾರಿ, ತರಾತುರಿ ಇನ್ನೊಂದು ತರ. ಶುಭ್ರವಾದ ಸಮವಸ್ತ್ರ ಧರಿಸಿ, ಅಮ್ಮನಿಂದ ನಿಲ್ಲದ ಜಡೆಗೆ ಧ್ವಜ ಬಣ್ಣದ ರಿಬ್ಬನ್ ಕಟ್ಟಿಸಿಕೊಂಡು, ಅಮ್ಮನಿಗೆ ನೀನು ಸರಿಯಾಗಿ ಬಾಚಿಲ್ಲ, ಬಿಗಿಯಾಗಿಲ್ಲ ಜಡೆ, ನಿನ್ನಿಂದ ಲೇಟಾಗ್ತದೆ ಅಂತೆಲ್ಲಾ ಹೇಳಿ, ಹಿಂದಿನ ದಿನವಷ್ಟೇ ಖರೀದಿಸಿದ ಬಣ್ಣದ ಬಳೆಗಳನ್ನು ಎರಡೂ ಕೈಗಳಿಗೆ ತೊಟ್ಟು, ಕೈಲ್ಲೊಂದು ಪುಟ್ಟ ಬಾವುಟ ಹಿಡಿದು, ಜೇಬಿನ ಭಾಗದಲ್ಲಿ ಕಣ್ಣಿಗೆ ಕಾಣಿಸದೇ ಇರುವ ಬಾವುಟದ ಬ್ಯಾಡ್ಜ್ ತೊಟ್ಟು ಸ್ವಾತಂತ್ರ್ಯ ದಿನದ ಆಚರಣೆಗೆ ನಾವು ತಯಾರು. ಶಾಲೆಗೆ ಹೋದಮೇಲೆ ಲೆಫ್ಟ್-ರೈಟ್‌ಗಳನ್ನು ಪ್ರದರ್ಶಿಸಿ, ನಮ್ಮ ತರಗತಿಯ ಸರತಿ ಸಾಲಲ್ಲಿ ಅಂಕುಡೊಂಕಾಗಿ ನಿಂತು ರಾಷ್ಟ್ರಗೀತೆಗೆ ಹಾಗೂ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವಾಗ ದೇಶಭಕ್ತಿಯಿಂದ ಮನ ಪುಳಕಗೊಳ್ಳುತ್ತಿತ್ತು.
ಅಲ್ಲಿಗೆ ಒಂದು ಹಂತ ಮುಗಿಯಿತು. ಮುಂದಿನ ಭಾಗದಲ್ಲಿ ನಡೆಯುವ ಅತಿಥಿಗಳ ಭಾಷಣ ವಿದ್ಯಾರ್ಥಿಗಳಿಗೆ ಪ್ರವಚನವಿದ್ದಂತೆ. ಇದೇ ಬಹಳ ಕಷ್ಟದ ಕೆಲಸ ಏಕೆಂದರೆ ಬಾಯಿಗೆ ಲಡ್ಡುವೋ, ಚಾಕೊಲೇಟೋ ಬಿದ್ದರೆ ಸಾಕು ಅನ್ನೋ ಭಾವನೆ ಮನದಲ್ಲಿರುತ್ತಿತ್ತು. ಇನ್ನು ಈ ದಿನ ನಮ್ಮ ಭಂಡ ಧೈರ್ಯಕ್ಕೆ ಸಾಕ್ಷಿಯಾಗುವ ದಿನ. ಎರಡು ದಿನಗಳಿಂದ ಮನೆಯಲ್ಲಿ ಅಮ್ಮನನ್ನು ಪೀಡಿಸಿ ಸ್ವಾತಂತ್ರ್ಯ ದಿನದ ಕುರಿತು ಬರೆಸಿಕೊಂಡ ಭಾಷಣ ಬಾಯಿಪಾಠ ಮಾಡಿ ಮನಸಿನಲ್ಲಿ ಹೆದರಿ, ಎದುರಲ್ಲಿ ಏನು ಇಲ್ಲದವರಂತೆ ತೋರಿಸಿಕೊಂಡು ವೇದಿಕೆ ಮೇಲೆ ಹೋಗಿ ಒಂದೇ ಉಸಿರಿನಲ್ಲಿ ಒದರಿಬಿಟ್ಟರೆ ದೊಡ್ಡ ಯುದ್ಧ ಗೆದ್ದ ಅನುಭವ.
ಅದಾದ ನಂತರ ಬಣ್ಣದ ಅಂಗಿ ತೊಟ್ಟು ನಾಲ್ಕು ಹೆಜ್ಜೆ ಹಾಕಿಬಿಟ್ಟರೆ ಆ ದಿನದ ಶಾಲಾ ಸಂಭ್ರಮ ಮುಗಿತು. ನಂತರ ಯಾರಿಗೂ ಕಾಯದೇ ನೇರವಾಗಿ ಮನೆಗೆ ಓಡಿ ಬರುವುದು, ದಿನದ ಬಾಕಿ ರಜೆಯನ್ನು ಅನುಭವಿಸಬೇಕಲ್ಲಾ! ಬೆಳೆಯುತ್ತಾ ದೊಡ್ಡವರಾದ ಹಾಗೇ ಸ್ವಾತಂತ್ರ್ಯ ದಿನದ ಸಂಭ್ರಮ ಬದಲಾಗುತ್ತಾ ಬಂದಿದೆ. ಕಾಲೇಜಿಗೆ ಬಂದ ಮೇಲಂತೂ ಮನೆಯ ಗೋಡೆಯ ಒಳಗೆ ಬಂಧಿಯಾಗಿದೆ ಇದರ ಆಚರಣೆ. ಪ್ರತಿ ವರ್ಷ ಈ ದಿನ ಮರುಕಳಿಸಿದಾಗಲೂ ಬಾಲ್ಯದ ಶಾಲಾ ದಿನಗಳ ಖುಷಿ, ಸಂಭ್ರಮ ನೆನೆಪಾಗುತ್ತದೆ. ಆ ದಿನಗಳ ಹಾಗೂ ವಾಸ್ತವದ ಆಚರಣೆಯಲ್ಲಿ ಎಷ್ಟು ಬದಲಾವಣೆಯಾಗಿದೆ ಅನಿಸಿಬಿಡುತ್ತದೆ.