Advertisement

ಶಾಲಾರಂಭ: ಮಕ್ಕಳಲ್ಲಿ ಉತ್ಸಾಹ, ಇಲಾಖೆ ಸನ್ನದ್ದ

06:00 AM May 25, 2018 | |

ಉಡುಪಿ: ಬೇಸಗೆ ರಜಾ ಮಜಾ ಕಳೆದು ಮತ್ತೆ ಶಾಲೆಯ ಮೆಟ್ಟಿಲೇರಲು ಮಕ್ಕಳು ಉತ್ಸುಕರಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತುದಿಗಾಲಲ್ಲಿ ನಿಂತಿದ್ದರೆ, ಇಲಾಖೆ ಕೂಡ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿ ನಿಂತಿದೆ.
 
ಈಗ ಹಳ್ಳಿಗಳಲ್ಲೂ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ವಾಹನದ ವ್ಯವಸ್ಥೆಗಳು ಸಿಗುವುದರಿಂದ ಶಾಲೆಗೆ ಹೋಗವುದು ಮಕ್ಕಳ ಪಾಲಿಗೆ ಸುಲಭವಾಗಿದೆ. ಜತೆಗೆ ಪೋಷಕರು ಒತ್ತಾಯದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸನ್ನಿವೇಶಗಳೂ ಇಲ್ಲ.  

Advertisement

ಶೇ.66ರಷ್ಟು ಪುಸ್ತಕ ಸಿದ್ದ
ಉಡುಪಿ ಜಿಲ್ಲೆಗೆ ಅಗತ್ಯವಿರುವ ಪಠ್ಯ ಪುಸ್ತಕಗಳ ಪೈಕಿ ಶೇ.66ರಷ್ಟು ಪೂರೈಕೆಯಾಗಿದೆ. ಇದನ್ನು ಆಯಾ ಶಾಲೆಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಮೇ 30ರಂದು ಶಾಲೆಗಳಲ್ಲಿ ವಿತರಣೆಯಾಗಲಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ದೊರೆಯಲಿದೆ. ಖಾಸಗಿ ಶಾಲೆಯವರು ಶಿಕ್ಷಣ ಇಲಾಖೆಯ ಗೋದಾಮಿನಿಂದ ಹಣಪಾವತಿಸಿ ಪಠ್ಯ ಪುಸ್ತಕಗಳನ್ನು ಪಡೆಯಬೇಕಾಗುತ್ತದೆ. ಈ ಪಠ್ಯಪುಸ್ತಕಗಳು ಅಂಗಡಿಗಳಲ್ಲಿ ದೊರೆಯುವುದಿಲ್ಲ. 

ಬಾರದ ಸಮವಸ್ತ್ರ
ಉಡುಪಿ ಜಿಲ್ಲೆಗೆ ಇದುವರೆಗೆ ಸಮ ವಸ್ತ್ರಗಳು ಬಂದಿಲ್ಲ. ಶೀಘ್ರ ಬರುವ ನಿರೀಕ್ಷೆ ಅಧಿಕಾರಿಗಳಿಗೆ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಬಳಿಕವೇ ಸಮವಸ್ತ್ರ ಶಾಲೆಗಳಿಗೆ ಪೂರೈಕೆಯಾಗಲಿದೆ.

ದಾಖಲಾತಿ ಆಂದೋಲನ
ಉಡುಪಿ ಜಿಲ್ಲೆಯಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಕರೆತರುವ ಪ್ರಯತ್ನವಾಗಿ ಇಲಾಖೆ ದಾಖಲಾತಿ ಆಂದೋಲನ ಆರಂಭಿಸಿದೆ. ಅದರಂತೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ಮನೆ ಮನೆಗಳಿಗೆ ತೆರಳಿ ಮಕ್ಕಳ ದಾಖಲಾತಿ, ಅರ್ಧದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ. ಮೇ 16ರಿಂದ ಈ ಆಂದೋಲನ ಆರಂಭ ಗೊಂಡಿದ್ದು ಮೇ 27ರವರೆಗೆ ಮುಂದು ವರಿಯಲಿದೆ.

ರವಿವಾರ ತರಗತಿಗೆ ಆಕ್ಷೇಪ
ಕೆಲವೊಂದು ಖಾಸಗಿ ಶಾಲೆಗಳು ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರವಿವಾರ ಕೂಡ ತರಗತಿಗಳನ್ನು ನಡೆಸುವ ಕುರಿತು ಮಾಹಿತಿ ಇದೆ. ಇದು ಸರಿಯಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ಅದೇ ರೀತಿ ಮುಂದಿನ ಬೇಸಗೆ ರಜಾಗಳ ಅವಧಿಯಲ್ಲಿ ಕೂಡ ತರಗತಿಗಳನ್ನು ಮಾಡದಂತೆ ಇಲಾಖೆ ಆದೇಶ ಹೊರಡಿಸಿದೆ. ಸರಕಾರಿ ಶಾಲೆ ಗಳಲ್ಲಿ ಶಾಲಾ ಶೈಕ್ಷಣಿಕ ಅವಧಿಯ ಎರಡನೇ ಅವಧಿಯ ಅನಂತರ ಮಾತ್ರವೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳಿಗಾಗಿ ವಿಶೇಷ ಕೋಚಿಂಗ್‌ ತರಗತಿ ಗಳನ್ನು ನಡೆಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು. 

Advertisement

ಮಳೆಗಾಲ: ಹೆತ್ತವರೇ ವಿವೇಚಿಸಿ
ಶಾಲಾರಂಭ ಮತ್ತು ಮಳೆಗಾಲ ಆರಂಭ ಒಂದೇ ಅವಧಿಯಲ್ಲಿ ಆಗುತ್ತದೆ. ಹಾಗಾಗಿ ವಿಶೇಷ ಎಚ್ಚರಿಕೆ ಅಗತ್ಯ. ನೀರು ಮಕ್ಕಳನ್ನು ಆಕರ್ಷಿಸುತ್ತದೆ. ನದಿ, ಹೊಳೆ, ಕಾಲುಸಂಕ ಮೊದಲಾದವುಗಳನ್ನು ದಾಟಿಕೊಂಡು ಹೋಗುವ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ ಬೇಕೇ ಬೇಕು. ಹೆಚ್ಚು ಮಳೆ ಬಂದರೆ ಅಂದು ಮುಖ್ಯೋಪಾಧ್ಯಾಯರು ವಿವೇಚನಾ ರಜೆ ನೀಡಬಹುದಾಗಿದೆ. ಇದಕ್ಕೆ ಜಿಲ್ಲಾಡಳಿತದ ಒಪ್ಪಿಗೆ ಬೇಕು. ಶಾಲೆಗೆ ರಜೆ ಇದೆಯೇ ಇಲ್ಲವೇ ಎಂಬುದನ್ನು ಶಾಲಾ ಶಿಕ್ಷಕರಿಗೆ ಕರೆ ಮಾಡಿ ಖಚಿತ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ರಜೆ ವಿಚಾರ ಖಚಿತವಾಗದಿದ್ದರೂ ಮಕ್ಕಳು ಹೋಗುವ ದಾರಿಯಲ್ಲಿ ಅಪಾಯ ಇದೆ ಎಂದು ಗೊತ್ತಾದರೆ ಅಂದು ಶಾಲೆಗೆ ಕಳುಹಿಸದಿರುವುದೇ ಕ್ಷೇಮ. 

-   ಮೇ 28ರಂದು ಶಾಲಾರಂಭ 
-   ಮೇ 29ರಂದು ಬೋಧನಾ ಪಟ್ಟಿ ಸಿದ್ಧತೆ
-   ಮೇ 30 ಶಾಲಾ ಪ್ರಾರಂಭೋತ್ಸವ 
-   ಜೂ. 1ರಿಂದ ರೆಗ್ಯುಲರ್‌ ಕ್ಲಾಸ್‌ 

– ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next