ಕಾರೈಕಲ್ : ಐದು ವರ್ಷ ಪ್ರಾಯದ ಕಿಂಡರ್ ಗಾರ್ಟನ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಿಲ್ಲೆಯ ಖಾಸಗಿ ಶಾಲೆಯೊಂದರ 42ರ ಹರೆಯದ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪಕೀರೀಸಾಮಿ ಎಂಬಾತನು ಸೇತೂರ್ ಗ್ರಾಮದಲ್ಲಿನ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯ. ಬಾಲಕಿಯ ಹೆತ್ತವರು ನೀಡಿದ ದೂರಿನ ಮೇಲೆ ಅತ್ಯಾಚಾರಿ ಮುಖ್ಯೋಪಾಧ್ಯಾಯ ಪಕೀರೀಸಾಮಿಯನ್ನು ಪೊಲೀಸರು ನಿನ್ನೆ ಸೋಮವಾರ ಬಂಧಿಸಿದರು.
ಆ.18ರಂದು ಬಾಲಕಿಯು ಅಸ್ವಸ್ಥಳಾಗಿ ಶಾಲೆಯಿಂದ ಮರಳಿದ್ದಳು. ಆಕೆಯ ಹೆತ್ತವರು ಆ ಬಗ್ಗೆ ವಿಚಾರಿಸಿದಾಗ ಶಾಲೆಯ ಹೆಡ್ ಮಾಸ್ಟರ್ ತನ್ನ ಮೇಲೆ ಎಸಗಿದ ಲೈಂಗಿಕ ಕೃತ್ಯವನ್ನು ಭಯಗ್ರಸ್ತಳಾಗಿ ಹೇಳಿಕೊಂಡಳು.
ಬಾಲಕಿಯ ಹೆತ್ತವರು ಮರುದಿನವೇ ಶಾಲೆಯ ಆಡಳಿತ ಮಂಡಳಿಯವರನ್ನು ಕಂಡು ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿದರು. ಆದರೆ ಆಡಳಿತ ಮಂಡಳಿಯವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.
ಬಳಿಕ ಹೆತ್ತವರು ಪೊಲೀಸರಿಗೆ ದೂರು ನೀಡಿ ಕಾಮುಕ ಮುಖ್ಯೋಪಾಧ್ಯಾನನ್ನು ಬಂಧಿಸುವಂತೆ ಆಗ್ರಹಿಸಿದರು. ಪೊಲೀಸರು ತನಿಖೆ ನಡೆಸಿ ಆತನನ್ನು ಅರೆಸ್ಟ್ ಮಾಡಿದರು.
ಕಾಮುಕ ಮುಖ್ಯೋಪಾಧ್ಯಾಯನ ಅಮಾನುಷ ಲೈಂಗಿಕ ಕೃತ್ಯವನ್ನು ಪ್ರತಿಭಟಿಸಿ ಸ್ಥಳೀಯರು ರಾಸ್ತಾ ರೋಕೋ ನಡೆಸಿದರು. ಉತ್ತರ ಕಾರೈಕಲ್ ಪೊಲೀಸ್ ಸುಪರಿಂಟೆಂಡೆಂಟ್ ಮರಿಮುತ್ತು ಮತ್ತು ಇತರ ಅಧಿಕಾರಿಗಳು ಭರವಸೆ ನೀಡಿದ ಬಳಿಕವೇ ಪ್ರತಿಭಟನೆ ನಿರತ ಸ್ಥಳೀಯರು ಚದುರಿದರು.
ಪೊಲೀಸರೀಗ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.