Advertisement
ಈ ಶುಲ್ಕ ನಿರ್ಧಾರ ಕಳೆದ ವರ್ಷಕ್ಕೆ ಮಾತ್ರ ಅನ್ವಯ. ಈ ವರ್ಷ ಇನ್ನೂ ಶುಲ್ಕ ನಿಗದಿಯೇ ಅಗಿಲ್ಲ. ಅಲ್ಲದೆ ಸರಕಾರವೂ ಈ ವರ್ಷ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಗೋಜಿಗೇ ಹೋಗಿಲ್ಲ. ಇಂದಿಗೂ ಶುಲ್ಕದ ವಿಚಾರದಲ್ಲಿ ಹೆತ್ತವರು ಮತ್ತು ಖಾಸಗಿ ಶಾಲೆಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಖಾಸಗಿ ಶಾಲಾ ಸಂಸ್ಥೆಗಳು ಮತ್ತು ಹೆತ್ತವರ ನಡುವೆ ಶುಲ್ಕಕ್ಕಾಗಿ ಕಿತ್ತಾಟ ನಡೆಯುತ್ತಿತ್ತು. ಆಗ ಮಧ್ಯ ಪ್ರವೇಶ ಮಾಡಿದ್ದ ರಾಜ್ಯ ಸರಕಾರ, ಕೊರೊನಾ ಕಾರಣದಿಂದಾಗಿ ಶೇ.30ರಷ್ಟು ಬೋಧನ ಶುಲ್ಕ ಕಡಿತಗೊಳಿಸುವಂತೆ ಹೇಳಿತ್ತು. ಸರಕಾರದ ಆದೇಶವನ್ನು ಜಾರಿಗೊಳಿಸುವಾಗಲೇ ಕೆಲವು ಖಾಸಗಿ ಶಾಲೆಗಳು ಹೆತ್ತವರಿಂದ ಮುಚ್ಚಳಿಕೆ ಬರೆಸಿಕೊಂಡು ಒಂದು ವೇಳೆ ಹೈಕೋರ್ಟ್ ನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ವಿನಾಯಿತಿ ನೀಡಿರುವ ಶುಲ್ಕ ನೀಡಬೇಕಾಗುತ್ತದೆ ಎಂದಿದ್ದವು. ಇದರಿಂದಾಗಿ ಬಹಳಷ್ಟು ಹೆತ್ತವರು ಮುಚ್ಚಳಿಕೆ ಬರೆದುಕೊಟ್ಟು, ಶೇ.70ರಷ್ಟು ಶುಲ್ಕ ಪಾವತಿಸಿದ್ದಾರೆ. ಈಗ ಶೇ.15ರಷ್ಟು ವಿನಾಯಿತಿ ನೀಡಿರುವುದರಿಂದ ಇನ್ನೂ ಶೇ.15ರಷ್ಟು ಹಳೆಯ ಶುಲ್ಕವನ್ನು ಹೆತ್ತವರು ಪಾವತಿಸಬೇಕು. ಈ ವರ್ಷದ ಶುಲ್ಕ ಕಟ್ಟಲು ಹೆತ್ತವರು ಒದ್ದಾಡುತ್ತಿರುವಾಗ ಉಳಿದ ಶೇ.15ರಷ್ಟು ಶುಲ್ಕ ಕಟ್ಟುವುದು ಕಷ್ಟವೇ ಸರಿ. ಆದರೂ ಹೈಕೋರ್ಟ್ ಆದೇಶ ನೀಡಿರುವುದರಿಂದ ಹೆತ್ತವರೂ ಏನೂ ಮಾಡುವಂತಿಲ್ಲ. ಈ ಬಗ್ಗೆ ಸರಕಾರ ಯಾವುದಾದರೂ ಕ್ರಮ ತೆಗೆದುಕೊಂಡರೆ ಒಳ್ಳೆಯದು. ಈ ಮೂಲಕವಾದರೂ ಹೆತ್ತವರಿಗೆ ನಿರಾಳತೆ ಸಿಗಬಹುದು.ಜತೆಗೆ ಹೈಕೋರ್ಟ್ ಆದೇಶವನ್ನೇ ಮುಂದಿರಿಸಿಕೊಂಡು ಖಾಸಗಿ ಶಾಲಾ ಸಂಸ್ಥೆಗಳು ಹೆತ್ತವರ ಮೇಲೆ ಅನಗತ್ಯ ಒತ್ತಡ ಹಾಕಬಾರದು. ಜತೆಗೆ ಮಕ್ಕಳ ಮೇಲೂ ಇದರ ಪರಿಣಾಮವಾಗದಂತೆ ನೋಡಿಕೊಳ್ಳಬೇಕು. ಕಳೆದ ವರ್ಷದ ಶುಲ್ಕ ಕಟ್ಟಿದರಷ್ಟೇ ಆನ್ ಲೈನ್ ಶಾಲೆ ಅಥವಾ ಭೌತಿಕ ಶಾಲೆಗೆ ಬನ್ನಿ ಎಂದು ಹೇಳುವಷ್ಟರ ಮಟ್ಟಿಗೆ ಹೋಗಬಾರದು. ಇದಕ್ಕಿಂತ ಹೆಚ್ಚಾಗಿ ಯಾರಿಗೆ ಶುಲ್ಕ ಕಟ್ಟಲು ಸಾಮರ್ಥ್ಯವಿದೆಯೋ ಅಂಥವರಿಂದ ಮಾತ್ರ ಶುಲ್ಕ ವಸೂಲಿ ಮಾಡಿಕೊಳ್ಳಬಹುದು.