ಬೆಂಗಳೂರು: ರಾಜ್ಯದಲ್ಲಿ 9ರಿಂದ 12ನೇ ತರಗತಿಯನ್ನು ಆರಂಭಿಸಬಹುದು ಎಂದು ಆರ್‌ಟಿಇ ಪಾಲಕರ ಸಂಘ ಮತ್ತು ಖಾಸಗಿ ಶಾಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.
ಶಾಲಾರಂಭಕ್ಕೆ ಸಂಬಂಧಿಸಿ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ, ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ. ಈ ಮಧ್ಯೆ ಆರ್‌ಟಿಇ ಪಾಲಕರು ಹಾಗೂ ಖಾಸಗಿ ಶಾಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಅಭಿಪ್ರಾಯ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬುಧವಾರ ಆರ್‌ಟಿಇ ಪಾಲಕರ ಸಂಘ ಮತ್ತು ಖಾಸಗಿ ಶಾಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿ, ಅಗತ್ಯ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಡಿಸೆಂಬರ್ 15ರ ಬಳಿಕ 9ರಿಂದ 12ನೇ ತರಗತಿಯನ್ನು ಆರಂಭಿಸಬಹುದು. ಶಾಲೆಯಲ್ಲಿ ನಿತ್ಯ ಪ್ರಾರ್ಥನೆ ಸಹಿತ ಪಠ್ಯೇತರ ಚಟುವಟಿಕೆ ನಡೆಸಬಾರದು, ಮಕ್ಕಳು ಗುಂಪು ಸೇರದಂತೆ ಎಚ್ಚರಿಕೆ ವಹಿಸಬೇಕು. ಎಸೆಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೊರೊನಾ ಕೃಪಾಂಕ ನೀಡಬೇಕು. ವಿದ್ಯಾರ್ಥಿಗಳ ಹಾಜರಿಗೆ ಪಾಲಕರಿಂದ ಮುಚ್ಚಳಿಕೆ ಪತ್ರ ಪಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹವನ್ನು ಇಲಾಖೆ ಮುಂದಿಟ್ಟಿದ್ದೇವೆ ಎಂದು ಆರ್‌ಟಿಇ ಪಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಮಾಹಿತಿ ನೀಡಿದರು.
ಶಾಲೆ ಆರಂಭದ 15 ದಿನ ಮೊದಲೇ ಶಾಲಾವರಣವನ್ನು ಸಂಪೂರ್ಣವಾಗಿ ಶುಚಿತ್ವ ಕಾಪಾಡಬೇಕು. ಸರಕಾರದಿಂದಲೇ ಶಾಲಾವರಣದ ಶುಚಿತ್ವದ ಕಾರ್ಯ ಆಗಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು. ತರಗತಿಗಳನ್ನು ಪಾಳಿ ಪದ್ಧತಿಯಲ್ಲಿ ನಡೆಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಗ್ರಹಿಸಿದರು.
ಶಾಲಾರಂಭಕ್ಕೆ ಸಂಬಂಧಿಸಿ ಈಗಾಗಲೇ ಒಂದು ವರದಿಯನ್ನು ಸಲ್ಲಿಸಿದ್ದೇವೆ. ಬುಧವಾರದ ಸಭೆಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಹೆಚ್ಚುವರಿ ಅಂಶಗಳನ್ನು ಸರಕಾರದ ಮುಂದಿಡಲಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.