ಮುಂಡಗೋಡ: ತಾಲೂಕಿನ ಇಂದಿರಾನಗರ ಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಷಯಕ್ಕೆ ಸಂಬಂಧಪಟ್ಟಂತೆ ಕಟ್ಟಡ ಉದ್ಘಾಟನಿಗೆ ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿದ ಘಟನೆ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಡೆದಿದೆ.
ಇಂದಿರಾನಗರ ಕೊಪ್ಪ ಸರಕಾರಿ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 44 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎರಡು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಹಳೆ ಕಟ್ಟಡ ಇದ್ದಿದ್ದರಿಂದ ಆ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಾಮಗಾರಿ ಆರಂಭವಾಗಿತ್ತು.
ಕಳೆದ 2 ವರ್ಷದಿಂದ ಬಾಡಿಗೆ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇನ್ನೇನು ಶಾಲೆ ಕಟ್ಟಡ ನಿರ್ಮಾಣವಾಗಿದ್ದು ಉದ್ಘಾಟನೆಗೆ ರೆಡಿಯಾಗಿದೆ. ಆದರೆ ನೂತನ ಕಟ್ಟಡದಲ್ಲಿ ಅಡುಗೆ ಕೊಠಡಿ, ಕುಡಿಯುವ ನೀರಿನ ಸೌಕರ್ಯವಿಲ್ಲ. ಅಲ್ಲದೆ ಶಾಲೆಯ ಹತ್ತಿರವಿದ್ದ ಕೊಳವೆ ಬಾವಿಯನ್ನು ಮುಚ್ಚಿದ್ದಾರೆ. ಮಳೆಗಾಲದಲ್ಲಿ ಆ ಸ್ಥಳದಲ್ಲಿ ಮಣ್ಣು ಕುಸಿಯುವ ಭಯವಿದೆ. ಇಷ್ಟೆಲ್ಲ ಅವ್ಯವಸ್ಥೆ ಮಧ್ಯೆ ಕಟ್ಟಡವನ್ನು ತರಾತುರಿಯಲ್ಲಿ ಕಾರ್ಮಿಕ ಸಚಿವರಿಂದ ಕೆಲವರು ಉದ್ಘಾಟನೆ ಮಾಡಿಸಲು ಮುಂದಾಗಿದ್ದಾರೆ.
ಶಾಲೆಯಲ್ಲಿ ಎಲ್ಲ ಸೌಕರ್ಯ ಆದ ನಂತರವೇ ಉದ್ಘಾಟನೆ ಮಾಡುವುದು ಒಳ್ಳೆಯದು ಎಂದು ಸಂತೋಷ ಕಳ್ಳಮನಿ, ಮಾಲತೇಶ ಹಿರೇಮಠ, ಸಂತೋಷ ನೇಕಾರ, ಯಲ್ಲಪ್ಪ ಮುತ್ತಕಿ, ಫಕ್ಕಿರಯ್ಯ ಹಿರೇಮಠ, ಈರಪ್ಪ ಕಾರಿ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಆಗ್ರಹಸಿದರು.
ಆ ಶಾಲೆಯಲ್ಲಿ ಎಲ್ಲಾ ಸೌಕರ್ಯವಿದೆ. ಕಲಿಕೆಗೂ ತೊಂದರೆ ಇಲ್ಲ. ಸುಸುಜ್ಜಿತ ಎರಡು ಕಟ್ಟಡ, ಗಂಡು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿದೆ. ಉದ್ಯೋಗ ಖಾತ್ರಿಯಲ್ಲಿ ಶಾಲೆಯ ಕಾಂಪೌಂಡ್ ನಿರ್ಮಾಣವಾಗುತ್ತಿದೆ. ಇನ್ನೇನು ಅಡುಗೆ ಕೊಠಡಿ ನಿರ್ಮಾಣ ಮಾಡುತ್ತೇವೆ. ಈಗಿರುವುದು ಉದ್ಘಾಟನೆ ವಿಷಯಕ್ಕೆ ಇಬ್ಬರು ಕರೆ ಮಾಡಿದ್ದರು. ಉದ್ಘಾಟನೆಗೆ ಸಂಬಂಧಪಟ್ಟಂತೆ ಗ್ರಾಮಸ್ಥರು ಮತ್ತು ಎಸ್‌ಡಿಎಂಸಿಯವರು ಸಚಿವರ ಜೊತೆ ಮಾತನಾಡಿದರೆ ಒಳ್ಳೆಯದು. ∙
ವಿ.ಎಸ್. ಪಟಗಾರ,ಬಿಇಒ ಮುಂಡಗೋಡ
ಕಳೆದ ಎರಡು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಮುಖ್ಯ ರಸ್ತೆ ಪಕ್ಕದಲ್ಲಿ ಈ ಶಾಲೆ ಇದೆ. ಅಡುಗೆ ಕೊಠಡಿ, ನೀರಿನ ಸೌಲಭ್ಯವಿಲ್ಲ. ಅಡುಗೆಯನ್ನು ಬೇರೆಡೆ ಮಾಡಿ ಮಕ್ಕಳನ್ನು ಕರೆದೊಯ್ಯಲು ಕಷ್ಟವಾಗುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆ ದಾಟಲು ಸಮಸ್ಯೆಯಾಗುತ್ತದೆ. ಈ ಸಮಯದಲ್ಲಿ ಶಾಲೆ ಆವರಣಲ್ಲಿ ಕೆಸರಾಗಿ ಕಾಲಿಡುವ ಪರಿಸ್ಥಿತಿ ಇಲ್ಲ. ಅಲ್ಲದೆ ಕೊಳವೆ ಬಾವಿಯನ್ನು ಸರಿಯಾಗಿ ಮುಚ್ಚಿಲ್ಲ. ಕುಸಿಯುವ ಭಯವಿದೆ. ಆದ ಕಾರಣ ಶಾಲೆಯಲ್ಲಿ ಎಲ್ಲ ಮೂಲ ಸೌಕರ್ಯ ಒದಗಿಸಿದ ನಂತರವೇ ಉದ್ಘಾಟನೆ ಮಾಡಬೇಕು. –
ದುರ್ಗಪ್ಪ ಭೋವಿವಡ್ಡರ, ಗ್ರಾಮದ ಪ್ರಮುಖ.
ಶಾಲೆಯಲ್ಲಿ ಪೂರ್ಣ ಪ್ರಮಾಣದ ಸೌಕರ್ಯ ಒದಗಿಸಿದ ನಂತರವೇ ಉದ್ಘಾಟನೆಯಾಗಲಿ. ಈ ಬಗ್ಗೆ ಗ್ರಾಮದ ಹಿರಿಯರ ಜೊತೆ ಸಚಿವ ಶಿವರಾಮ ಹೆಬ್ಟಾರ್ ಬಳಿ ತೆರಳುತ್ತಿದ್ದೇವೆ.
-ತೀರ್ಥ ಭೋವಿ, ಎಸ್‌ಡಿಎಂಸಿ ಅಧ್ಯಕ್ಷ.