Advertisement

ಶಾಲಾ ಸಂಪರ್ಕ ಸೇತು ಯೋಜನೆ: ಸಿಎಂಗೆ ಕೃತಜ್ಞತೆ

11:14 PM Jun 11, 2019 | Lakshmi GovindaRaj |

ಬೆಂಗಳೂರು: ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಮಂಗಳವಾರ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.

Advertisement

ಸಂಪರ್ಕ ಸೇತು ಯೋಜನೆಯ ಅನುಷ್ಠಾನವನ್ನು ಗಮನಕ್ಕೆ ತರಲು ನಿರ್ಮಾಣಗೊಂಡ ಸೇತುವೆಯ ಬಳಿಯಿಂದಲೇ ಸ್ಥಳೀಯ ಅಧಿಕಾರಿಗಳು ಸಿಎಂ ಜತೆ ವಿಡಿಯೋ ಸಂವಾದ ನಡೆಸಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವಿವರ ನೀಡಿದರು.

ಶಾಲಾ ಸಂಪರ್ಕ ಸೇತು ಯೋಜನೆ ಬಹುತೇಕ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಉಳಿದ ಕಾಮಗಾರಿ 2-3 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಪುತ್ತೂರು ತಾಲೂಕಿನ ಕುಂತೂರು ಮಜಲು, ಅರ್ಬಿ ಗ್ರಾಮ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿಯ ದೋಡ್ಲಿಮನೆಹಳ್ಳ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಬೆಳ್ಳಿಮಡಿಕೆಯ ವಿದ್ಯಾರ್ಥಿಗಳು,

ಪೋಷಕರು ಮತ್ತು ಸ್ಥಳೀಯರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಕಾಲುಸುಂಕಗಳ ಬದಲಿಗೆ ಶಾಲಾ ಸಂಪರ್ಕ ಸೇತು ಯೋಜನೆಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ ಮುಖ್ಯಮಂತ್ರಿಯವರರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಶಾಲಾ ಕಟ್ಟಡ ನಿರ್ಮಾಣಕ್ಕೆ 1200 ಕೋಟಿ ರೂ. ಕೊಟ್ಟಿದ್ದೇವೆ. ಇದರ ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿ ಅಹವಾಲು: ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು “ತೀರ್ಥಹಳ್ಳಿಯ ತಮ್ಮ ಶಾಲೆಗೆ ವಿದ್ಯಾರ್ಥಿಗಳು ದೂರದಿಂದ ಪ್ರಯಾಣ ಮಾಡಿ ಬರುವುದರಿಂದ ಸಾರಿಗೆ ಮತ್ತು ವಸತಿ ಸೌಲಭ್ಯ ಒದಗಿಸುವಂತೆ’ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಅಲ್ಲಿ ಗ್ರಾಮವಾಸ್ತವ್ಯ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸ್ಥಳೀಯರು ಮುಖ್ಯಮಂತ್ರಿಯವರಿಗೆ ತಿಳಿಸಿದರು. ಕಳೆದ ನವೆಂಬರ್‌ನಲ್ಲಿ ಕನಗನಮರಡಿ ಗ್ರಾಮದಲ್ಲಿ ಬಸ್‌ ದುರಂತ ಸಂಭವಿಸಿತ್ತು.

ಗ್ರಾಮೀಣ ಭಾಗದವರಿಗೆ ಅನುಕೂಲ: ಶಾಲಾ ಸಂಪರ್ಕ ಸೇತು ಸರ್ಕಾರದ ಪ್ರಮುಖ ಯೋಜನೆಯಾಗಿದ್ದು ಗ್ರಾಮೀಣ ಭಾಗದ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದು ಹೇಳಿದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಶಾಲಾ ಸಂಪರ್ಕ ಸೇತು ಯೋಜನೆಯ ಪ್ರಗತಿ ವಿವರ ಸಭೆಗೆ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next