Advertisement

ಆ.31ರವರೆಗೆ ಶಾಲಾ-ಕಾಲೇಜು ಬಂದ್‌

04:28 PM Aug 01, 2020 | Suhan S |

ಯಾದಗಿರಿ: ಕೋವಿಡ್‌19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ತೆರವು-3ರ ಮಾರ್ಗಸೂಚಿಗಳು ವ್ಯಾಪಾರಸ್ಥರು ಸೇರಿ ಹಲವು ಕ್ಷೇತ್ರಗಳ ನಿಯಮ ಸಡಿಲಗೊಂಡಿದ್ದು, ಜನರು ಕೊಂಚ ನಿರಾಳವಾಗುವಂತೆ ಮಾಡಿದೆ.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಎಂ.ಕೂರ್ಮಾರಾವ್‌ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್‌ಲಾಕ್‌-3 ಆಗಸ್ಟ್‌ 1ರಿಂದ ಜಾರಿಗೊಂಡು ಆ.31ರವರೆಗೆ ಚಾಲ್ತಿಯಲ್ಲಿರುವುದಾಗಿ ತಿಳಿಸಿದರು.

ಕಂಟೈನ್‌ಮೆಂಟ್‌ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಕೆಲವನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ಅನುಮತಿಸಲಾಗುವುದು. ಶಾಲೆ- ಕಾಲೇಜು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಆ.31, 2020ರವರೆಗೆ ಮುಚ್ಚಲ್ಪಡುತ್ತವೆ. ಆನ್‌ಲೈನ್‌/ ದೂರ ಶಿಕ್ಷಣ ಕಲಿಕೆಗಳಿಗೆ ಅನುಮತಿಸುವುದನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು. ಸಿನಿಮಾ ಮಂದಿರ, ಈಜುಕೊಳ, ಮನರಂಜನಾ ಉದ್ಯಾನವನ, ಚಿತ್ರಮಂದಿರ, ಬಾರ್‌ ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‌ ಮತ್ತು ಅಂತಹುದೇ ಸ್ಥಳಗಳು ತೆರೆಯುವಂತಿಲ್ಲ ಎಂದು ಹೇಳಿದರು.

ಯೋಗ ಕೇಂದ್ರಗಳನ್ನು ಮತ್ತು ಜಿಮ್ನಾಷಿಯಂಗಳನ್ನು ತೆರೆಯಲು ಆ.5ರಿಂದ ಅನುಮತಿಸಲಾಗುವುದು. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆಗಳು ಇತರೆ ಬೃಹತ್‌ ಸಭೆಗಳನ್ನು ನಿಷೇಧಿ ಸಿದೆ ಎಂದರು.

ಆ.15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತ ಸರ್ಕಾರದ ಗೃಹ ಮಂತ್ರಾಲಯವು ಹೊರಡಿಸಿರುವ ಸೂಚನೆಗಳನ್ವಯ ಆಚರಿಸಲಾಗುವುದು. ಇದಕ್ಕಾಗಿ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿ, ಶಿಷ್ಟಾಚಾರದಂತೆ ಸ್ವಾತಂತ್ರ್ಯ ದಿನಾಚರಣೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕೋವಿಡ್‌-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಆ. 1ರಂದು ಬಕ್ರೀದ್‌ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ಪ್ರಾಣಿಗಳ ಸಾಗಣೆ ಮತ್ತು ಕಾನೂನು ಬಾಹಿರವಾಗಿ ವಧೆ ಮಾಡುವುದನ್ನು ನಿಷೇಧಿಸಿದ್ದು, ಪ್ರಾಣಿಗಳ ಅಕ್ರಮ ಸಾಗಣೆ ತಡೆಗೆ ಅಧಿಕಾರಿಗಳ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲೆಯಲ್ಲಿ ಕಾಲಕಾಲಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಜು.25ರಂದು ಪ್ರವಾಹದ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಈಗಾಗಲೇ ತೆಗೆದುಕೊಂಡ ಕ್ರಮಗಳ ಕುರಿತು ಸಭೆ ನಡೆಸಲಾಗಿದೆ ಎಂದರು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 217 ಮಿಮೀ ಇದ್ದು ಜು. 30ರವರೆಗೆ 368 ಮಿಮೀ ಮಳೆಯಾಗಿರುತ್ತದೆ. ಶೇ.70ರಷ್ಟು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಜೂನ್‌, ಜುಲೈ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಸುಮಾರು 2885.02 ಹೆಕ್ಟೇರ್‌ಗಳಷ್ಟು ಹಾನಿಯಾಗಿದ್ದು, ಈ ಕುರಿತು ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಅಂತಿಮ ವರದಿಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಪೂರ್ಣಗೊಂಡ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗುರುಮಠಕಲ್‌ ತಾಲೂಕಿನ ಕಾಕಲವಾರ ಗ್ರಾಮದಲ್ಲಿ ಮೇ 8ರಂದು 22 ವರ್ಷದ ಯುವಕನೊಬ್ಬ ಸಿಡಿಲು ಬಡಿದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾರೆ. ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಧನದ ಚೆಕ್‌ ವಿತರಿಸಲಾಗಿದೆ. ಜು.19ರಂದು ಕಂದಕೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಶಿಥಿಲಗೊಂಡ ಮನೆ ಬಿದ್ದು ಮಹಿಳೆ ಮೃತಪಟ್ಟಿದ್ದು, ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ. ಜಿಲ್ಲೆಯಲ್ಲಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಶಹಾಪೂರ-108 ಮತ್ತು ಯಾದಗಿರಿ-90 ಮನೆಗಳು ಭಾಗಶಃ ಹಾನಿಯಾಗಿವೆ. ಈ ಮನೆಗಳಿಗೆ ಪರಿಹಾರ ಧನ ನೀಡುವ ಪ್ರಕ್ರಿಯೆ ಜಾರಿಯಲ್ಲಿರುವುದಾಗಿ ಡಿಸಿ ವಿವರಿಸಿದರು.

ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನವಣೆ, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಅಶ್ವಿ‌ಜಾ ಬಿ.ವಿ., ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎಸ್‌.ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next