ಆಟೋಗ್ರಾಫ್! ಈ ಪದವೇ ಒಂದು ರೊಮಾಂಚನ..
ಆಟೋಗ್ರಾಫ್ ಎನ್ನುವುದು ಒಂದು ಕನಸು. ಹಲವರಿಗೆ ತಮ್ಮ ನೆಚ್ಚಿನ ಖ್ಯಾತ ವ್ಯಕ್ತಿಗಳ ಬಳಿ ಆಟೋಗ್ರಾಫ್ ಪಡೆಯುವುದೇ ಒಂದು ಕನಸಾದರೆ ಇನ್ನೂ ಕೆಲವರಿಗೆ ತಾವೂ ಸುಪ್ರಸಿದ್ಧ ವ್ಯಕ್ತಿಗಳಾಗಿ ಆಟೋಗ್ರಾಫ್ ನೀಡಬೇಕೆನ್ನುವುದೇ ಒಂದು ಕನಸು-ಗುರಿಯಾಗಿರುತ್ತದೆ.
ನಮ್ಮ ಬಾಲ್ಯದಲ್ಲಿ ಶಾಲೆಗಳಲ್ಲಿ ಸಹಪಾಠಿ, ಮಿತ್ರರ ನೆನಪುಗಳಿಗಾಗಿ ವರ್ಷದ ಕೊನೆಯಲ್ಲಿ ಆಟೋಗ್ರಾಫ್ ಬರೆಸಿಕೊಳ್ಳುತ್ತಿದ್ದೆವು. ಹಲವು ಅಂಗಡಿಗಳಿಗೆ ತೆರಳಿ ಹುಡುಕಿ ವೈವಿಧ್ಯ ಬಣ್ಣ ಬಣ್ಣದ ಆಟೋಗ್ರಾಫ್ ಪುಸ್ತಕ ಕೊಂಡು ಸಹಪಾಠಿ ಮಿತ್ರರಿಗೆ ಒಂದೊಂದುದಿನ ಪಾಳಿ ಪ್ರಕಾರ ಕೊಟ್ಟು ಬರೆಸಿಕೊಳ್ಳುವುದೇ ಒಂದು ಸಡಗರ. ಇನ್ನು ನಮಗೆ ಬಂದ ಆಟೋಗ್ರಾಫ್ ಪುಸ್ತಕ ಬರೆಯುವುದೇ ಒಂದು ದೊಡ್ಡ ಸಾಧನೆ. ಅದನ್ನು ಯಾವ ಕಲರ್ ಪೆನ್ಸಿಲಿನಿಂದ ಬರೆಯುವುದು? ಹೇಗೆ ವರ್ಣನಾತ್ಮಕವಾಗಿ ಮಾಡುವುದು?ಎಂಬುದೇ ಯಕ್ಷಪ್ರಶ್ನೆ. ತರಗತಿಯಲ್ಲಿ ದಿನಕ್ಕೆ ಹೆಚ್ಚು ಆಟೋಗ್ರಾಫ್ ಬಂದವರೆ ಹೀರೋ ಆಗಿಬಿಡುತ್ತಿದ್ದರು.
“ಟೀಚರ್ ಇವತ್ತು ಆಟೋಗ್ರಾಫ್ ಬುಕ್ಕ ಬರಿಯುದ ಬಾಳ ಇತ್ತರಿ’ ಎಂದೂ ಹೋಂ ವರ್ಕ್ ಮಾಡದಿರಲು ಕಾರಣ ಕೊಟ್ಟವರೂ ಉಂಟು. ಶಾಲೆ, ಕಾಲೇಜಿನ ಕೊನೆಯ ದಿನಗಳಲ್ಲಿಎಲ್ಲರ ಕೈಯಲ್ಲೂ ಆಟೋಗ್ರಾಫ್ ಹೊತ್ತಗೆಗಳೇ ರಾರಾಜಿಸುತ್ತಿದ್ದವು.
ನೋಟ್ಸ್‌ಗಳನ್ನಾದ್ದರೂ ತರುವುದು ಮರೆಯುತ್ತಿದ್ದರೇನೋ, ಆದರೆ ಇದನ್ನಲ್ಲ. ವರ್ಷವಿಡೀ ಕೈಯಲ್ಲಿ ಒಂದೇ ಪುಸ್ತಕ ಹಿಡಿದು ಶೋಕಿ ಮಾಡಲು ಬರುವವರೆಲ್ಲ ಆ ಸಮಯಗಳಲ್ಲಿ ಆಟೋಗ್ರಾಫ್ ಪುಸ್ತಕ ವಿನಿಮಯಕ್ಕೆ ಕಾಲೇಜ್ ಬ್ಯಾಗೇ ತರುತ್ತಿದ್ದರು. ಆಟೋಗ್ರಾಫ್ ಪುಸ್ತಕ ಎನ್ನುವುದೇ ಒಂದು ಭಾವನಾತ್ಮಕ ನೆನಪಿನ ಬುತ್ತಿ…ಅದು ಹಲವು ಮಧುರಕ್ಷಣವನ್ನು, ಮಿತ್ರರ ಹಸ್ತಾಕ್ಷರವನ್ನು ಹೊತ್ತಿರುವ ಹೊತ್ತಗೆ.
ಎಷ್ಟೋ ವರ್ಷಗಳ ಅನಂತರ ಪುರುಸೊತ್ತು ಮಾಡಿಕೊಂಡು ಕಟ್ಟಿಟ್ಟ ಗಂಟನ್ನು ತೆಗೆದು ಧೂಳು ಜಾಡಿಸಿ ಆಟೋಗ್ರಾಫ್ ಪುಸ್ತಕದ ಒಂದೊಂದೇ ಪುಟ ತಿರುಗಿಸಿದಾಗ ಅದು ನಮ್ಮನ್ನು ಶಾಲಾ, ಕಾಲೇಜಿನ ನೆನಪುಗಳತ್ತ ಕೊಂಡೊಯ್ಯುತ್ತದೆ.ನಮ್ಮದೇ ಉದ್ಯೋಗ, ಸಂಸಾರದ ಜಂಜಾಟದ ಜಗತ್ತಿನಲ್ಲಿ ಕಳೆದು ಹೋದ ನಮಗೆ ಅಲ್ಲಿ ಬರೆದಿರುವ ನಮ್ಮದೇ ಮಿತ್ರರ ಸಾಲುಗಳಿಗೆ ಕಳೆದು ಹೋದ ಸುಂದರ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯಿದೆ.
ಹಳೆ ಮಿತ್ರರನ್ನು ಸ್ಮತಿಪುಟಗಳಲ್ಲಿ ತಂದು ಕಳೆದು ಹೋದ ಸಹಪಾಠಿಗಳನ್ನು ಮತ್ತೆ ಬೆಸೆಯುವಂತೆ ಮಾಡುವ ಕೊಂಡಿ ಆಟೋಗ್ರಾಫ್ ಪುಸ್ತಕ. ರಭಸದಿಂದ ಹರಿಯುತ್ತಿರುವ ಕಾಲಚಕ್ರದ ಸುಳಿಗೆ ಸಿಕ್ಕಿಹಾಕಿಕೊಂಡು ಮೊಬೈಲ್ ಮುಂತಾದ ಆಧುನಿಕ ತಂತ್ರಜ್ಞಾನದ ಮಾಯಾ ಪಾಶ ಗಳಿಗೆ ಸಿಲುಕಿದ ಯುವ ಪೀಳಿಗೆ ಗಳ ಕೈಯಿಂದ ಅಳಿವಿನ ಅಂಚಿ ನಲ್ಲಿರುವ ಮಾಯಾಪುಸ್ತಕಕ್ಕೆ ನನ್ನ ಭಾವಪೂರ್ಣ ನಮನ.
ಮಹಿಮಾ ಭಟ್, ಧಾರವಾಡ ವಿವಿ