ಬೆಂಗಳೂರು: ರಾಜ್ಯ ಸರ್ಕಾರ ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಬೆನ್ನಲ್ಲೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.
ರಾಜ್ಯ ಸರ್ಕಾರವು ರಾಜ್ಯ ಪಠ್ಯಕ್ರಮದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಬ್ಯಾಗ್ ಭಾರ ಇಳಿಸಲು ಆದೇಶ ಹೊರಡಿಸಿದೆ. ಅಲ್ಲದೆ, ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಂ ವರ್ಕ್( ಮನೆಕೆಲಸ) ನೀಡಬಾರದು ಎಂಬ ನೀತಿಯೂ ಸರಿಯಿಲ್ಲ.
ಕೇಂದ್ರ ಪಠ್ಯಕ್ರಮದ ಶಾಲೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಸರ್ಕಾರ, ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ವಿರುದ್ಧ ಈ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಆರೋಪಿಸಿದೆ.
ಮಕ್ಕಳ ಶಾಲಾ ಬ್ಯಾಗ್ ಭಾರವೇ ಕನಿಷ್ಠ 500ರಿಂದ 700 ಗ್ರಾಂ ಇರುತ್ತದೆ. ಅಂತಹುದರಲ್ಲಿ 10ನೇ ತರಗತಿಯೊಳಗಿನ ಮಕ್ಕಳ ಬ್ಯಾಗ್‌ನ ಭಾರ 5 ಕೆ.ಜಿ.ಒಳಗಿರಬೇಕು ಎಂಬ ನಿಯಮ ಸರಿಯಲ್ಲ. ಹಾಗಾದರೆ ಮಕ್ಕಳು ಶಾಲೆಗೆ ಪಠ್ಯಪುಸ್ತಕ ತರುವುದು ಬೇಡವೇ?
ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಸರ್ಕಾರ ಈ ರೀತಿ ಆದೇಶ ಹೊರಡಿಸಿರುವುದು ಸರಿಯಲ್ಲ. ಅಧಿಕಾರಿಗಳ ಸಭೆಯಲ್ಲೂ ಇದನ್ನು ಪ್ರಸ್ತಾಪಿಸಿದ್ದೇವೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆರೋಪಿಸಿದರು.