Advertisement

ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು ಪ್ರಯಾಣ ಬೇಡ

09:39 PM Jul 01, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವಜನಿಕರ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ವಾಹನ ಮಾಲೀಕರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ಎಚ್ಚರಿಸಿದರು.

Advertisement

ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ ಅಪಘಾತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಸಾರಿಗೆ ಇಲಾಖೆ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಪರವಾನಿಗೆ ರದ್ದುಪಡಿಸಿ: ರಾಜ್ಯದ ಉಚ್ಚ ನ್ಯಾಯಾಲಯ ಆದೇಶದಂತೆ ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಕಾರ್ಮಿಕರು ಸಾರ್ವಜನಿಕರನ್ನು ಕೊಂಡೊಯ್ಯುವ ವಾಹನಗಳ ಚಾಲಕರ ಚಾಲನಾ ಅನುಜ್ಞಾ ಪತ್ರ ವಾಹನದ ನೋಂದಣಿ ಪತ್ರ ಮತ್ತು ರಹದಾರಿ ಅಮಾನತ್ತಿಗೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಿವು ಮೂಡಿಸಿ: ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಕೂಡಲೇ ಜಿಲ್ಲೆಯ ಎಲ್ಲಾ ಶಾಲೆಗಳ ಶಾಲಾ ಮುಖ್ಯಸ್ಥರ ಸಭೆ ನಡೆಸಿ ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಪ್ರಯಾಣಿಸದಂತೆ ಶಾಲಾ ಮಕ್ಕಳು ಮತ್ತು ಪೋಷಕರಿಗೆ ಅರಿವು ಮೂಡಿಸಲು ಸೂಚಿಸಿದರು. ಯಾವುದೇ ಕಾರಣಕ್ಕೂ ಆಟೋ ರಿಕ್ಷಾಗಳಲ್ಲಿ 6 ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರಯಾಣಿಸದಂತೆ ಬೆಳಗ್ಗೆ, ಸಂಜೆ ತಪಾಸಣೆ ನಡೆಸಬೇಕು, ಆಟೋ ಚಾಲಕರಿಗೂ ಈ ಬಗ್ಗೆ ಅರಿವು ಮೂಡಿಸಬೇಕೆಂದರು.

ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಪಘಾತಗಳ ಪ್ರಮಾಣವನ್ನು ವಾರ್ಷಿಕವಾಗಿ ಶೇ.10 ರಷ್ಟು ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಈ ಹಿಂದೆ ಗುರುತಿಸಲಾದ ಅಪಘಾತ ವಲಯಗಳಲ್ಲಿ ಅಪಘಾತ ತಡೆಯಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಂದ ಮಾಹಿತಿ ಪಡೆದು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದರು.

Advertisement

ಅಪಘಾತವಾದ ಗಾಯಾಳುಗಳಿಗೆ ಕೂಡಲೇ ತುರ್ತಾಗಿ ಆಂಬ್ಯುಲನ್ಸ್‌ ಸೇವೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಇದಕ್ಕೆ ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಯೂ ಕಾರ್ಯನಿರ್ವಸುವಂತೆ ನೋಡಿಕೊಳ್ಳಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವೆಂಕಟೇಶ್‌, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌, ಪ್ರೊಬೇಷನರಿ ಡಿವೈಎಸ್‌ಪಿ ಗೌತಮ್‌, ನಗರಸಭೆ ಆಯುಕ್ತ ಉಮಾಕಾಂತ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳ ಆರಕ್ಷಕ ವೃತ್ತ ನಿರೀಕ್ಷಕರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆದ್ದಾರಿ ಕಾಮಗಾರಿ ಪೂರ್ಣಕ್ಕೆ ಅಕ್ಟೋಬರ್‌ ಗಡುವು: ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ -234 ನಿರ್ಮಾಣದ ಕಾರ್ಯವನ್ನು ಮುಂದಿನ ಅಕ್ಟೋಬರ್‌ 1 ರೊಳಗೆ ಪೂರ್ಣಗೊಳಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಗಡುವು ನೀಡಿದರು. ಈಗಾಗಲೇ ರಸ್ತೆ ಕಾಮಗಾರಿ ವಿಳಂಬದಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ವಾಹನಗಳ ಅಪಘಾತ ಹೆಚ್ಚಾಗಿದೆ. ಇದರಿಂದ ಬಾಕಿ ಕಾಮಗಾರಿಯನ್ನು 4 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಸಮಿತಿಗೆ 8 ಲಕ್ಷ ಅನುದಾನ: ಸಭೆಯಲ್ಲಿ ರೆಡ್ಡಿಗೊಲ್ಲವಾರಹಳ್ಳಿ, ಹೊನ್ನೇನಹಳ್ಳಿ, ಸೇಟ್‌ದಿನ್ನೆ ಗೇಟ್‌, ಸ್ಥಳಗಳಲ್ಲಿ ಹಾಗೂ ಎಲ್ಲಾ ನಗರಸಭೆ ಮತ್ತು ಪುರಸಭೆ ಪಟ್ಟಣಗಳಲ್ಲಿ ರಸ್ತೆ ಬದಿ ದೀಪಗಳನ್ನು ಸರಿಪಡಿಸಲು ಸೂಚನೆ ನೀಡಿದರು. ಪ್ರಮುಖ ಪಟ್ಟಣಗಳಲ್ಲಿ ರಸ್ತೆಯ ಅಕ್ಕಪಕ್ಕ ಗಿಡಮರಗಳನ್ನು ನೆಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಸ್ಪಿ ಸಂತೋಷ ಬಾಬು ಸೂಚಿಸಿದರು. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ಸುಮಾರು 8 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸದರಿ ಮೊತ್ತದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next